ಲಿವಿಂಗ್ ಟುಗೆದರ್ ನಲ್ಲಿದ್ದ ಗೆಳತಿಯನ್ನು ಕೊಲೆ ಮಾಡಿ ಫಿಡ್ಜ್ನಲ್ಲಿಟ್ಟ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ವರ್ಷ ಇದೇ ರೀತಿ Shraddha Wakar ಎಂಬಾಕೆಯ ಕೊಲೆ ನಡೆದಿತ್ತು. ಆಕೆಯ ಶವವನ್ನು ಕತ್ತರಿಸಿ 35 ಭಾಗ ತುಂಡರಿಸಿ ಫ್ರಿಡ್ಜ್ನಲ್ಲಿರಿಸಿ ಬಳಿಕ ವಿಲೇವಾರಿ ಮಾಡಲಾಗಿತ್ತು. ಇದೀಗ ಅಂತದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಲೀವ್ ಇನ್ ರಿಲೇಷನ್ನಲ್ಲಿದ್ದ ತನ್ನ ಗೆಳತಿ ನಿಕ್ಕಿ ಯಾದವ್ಳನ್ನು ಸಾಹಿಲ್ ಗೆಹ್ಲೋಟ್ (24) ಕೊಲೆ ಮಾಡಿದ್ದ. ನಂತರ ಮೊಬೈಲ್ ಡೇಟಾ ಕೇಬಲ್ ಅನ್ನು ಆಕೆಯ ಕತ್ತಿಗೆ ಸುತ್ತಿ ಉಸಿರುಗಟ್ಟಿಸಿ ಸಾಯಿಸಿದ್ದ. ಬಳಿಕ ಆ ಶವವನ್ನು ಫ್ರಿಡ್ಜ್ನಲ್ಲಿಟ್ಟಿದ್ದ. ರಸ್ತೆ ಬದಿಯ ಡಾಬಾ ಕಂ ರೆಸ್ಟೂರೆಂಟ್ನ ಫ್ರಿಡ್ಜ್ನಲ್ಲಿ ಆಕೆಯ ಶವವು ಪತ್ತೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇಂದು ಈತನನ್ನು ಕೋರ್ಟ್ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
24 ವರ್ಷದ ಸಾಹಿಲ್ ಗೆಹ್ಲೋಟ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಗೆಳತಿಯನ್ನು ಕೊಂದು ಆಕೆಯ ಶವವನ್ನು ಮರೆಮಾಡಲು ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿದೆ.ಈತ ಆಕೆಯೊಂದಿಗೆ ಲೀವ್ ಇನ್ ರಿಲೇಷನ್ಶಿಪ್ನಲ್ಲಿದ್ದು, ಇದೀಗ ಆತ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಬಯಸಿದ್ದ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಜಗಳವಾಗಿ ಫೆಬ್ರವರಿ 10ರಂದು ಈಕೆಯನ್ನು ಹತ್ಯೆ ಮಾಡಿದ್ದಾನೆ. ತನ್ನ ಮದುವೆಗೆ ಕೆಲವೇ ಗಂಟೆಗಳು ಇರುವಾಗ ಈ ಹತ್ಯೆ ಮಾಡಿದ್ದಾನೆ. ಜಗಳದ ನಂತರ 23 ವರ್ಷದ ನಿಕ್ಕಿ ಯಾದವ್ಳನ್ನು ಕೊಂದು ಆಕೆಯ ಶವವನ್ನು ತನ್ನ ಕುಟುಂಬದ ಒಡೆತನದ ಡಾಬಾದಲ್ಲಿ ಫ್ರಿಡ್ಜ್ನಲ್ಲಿ ಭದ್ರವಾಗಿ ಇಟ್ಟಿದ್ದ. ಮದುವೆ ಮುಗಿದ ಬಳಿಕ ಶವ ವಿಲೇವಾರಿ ಮಾಡಲು ಈತನ ಪ್ಲಾನ್ ಆಗಿತ್ತು ಎಂದು ತನಿಖೆಯ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಅಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಇವರ ನಡುವೆ ಜಗಳವಾಗಿದೆ ಎನ್ನಲಾಗಿದೆ. ಕಾರಿನಲ್ಲಿಯೇ ಮೊಬೈಲ್ ಡೇಟಾ ಕೇಬಲ್ ಬಳಸಿ ಈತ ಕೊಲೆ ಮಾಡಿದ್ದನಂತೆ.
24 ವರ್ಷ ಪ್ರಾಯದ ಸಾಹಿಲ್ ಗೆಹ್ಲೋಟ್ ಫಾರ್ಮಾ ಪದವೀಧರರನಾಗಿದ್ದು, ಕೊಲೆ ಮಾಡಿದ ದಿನವೇ ಇನ್ನೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ಮತ್ತೊಬ್ಬ ಮಹಿಳೆಯನ್ನು ಈತ ಮದುವೆಯಾಗಿರುವ ಸುದ್ದಿ, ಈತನಿಗೆ ಬೇರೊಬ್ಬ ಮಹಿಳೆಯ ಜತೆಗೆ ಸಂಬಂಧವಿರುವುದು ಇದೀಗ ಹತ್ಯೆಯಾದ ನಿಕ್ಕಿ ಯಾದವ್ಗೆ ತಿಳಿದಾಗ ತುಂಬಾ ತಡವಾಗಿತ್ತು. ಅಷ್ಟರಲ್ಲಿ ಹೊಸ ಹುಡುಗಿಯ ಜತೆ ಆತನ ನಿಶ್ಚಿತಾರ್ಥ ನಡೆದಿತ್ತು. ಈ ವಿಷಯಕ್ಕೆ ಸಂಬಂಧಪಟ್ಟ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಈತ ಕೊಲೆಗೆ ಬಳಸಿದ್ದ ಕಾರನ್ನು ಪೊಲೀಸರು ಸೀಝ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈತನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕಳೆದ ವರ್ಷ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೂ ಈ ಘಟನೆಗೂ ಹೋಲಿಕೆ ಇದೆ. ಶ್ರದ್ಧಾಳನ್ನು ಆಕೆಯ ಲಿವ್-ಇನ್ ಜತೆಗಾರ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿ, ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಫಿಡ್ಜ್ನಲ್ಲಿಟ್ಟಿದ್ದನು. ಬಳಿಕ ವಿವಿಧ ಕಡೆಗಳಲ್ಲಿ ಶವದ ಕತ್ತರಿಸಿದ ಭಾಗಗಳನ್ನು ವಿಲೇವಾರಿ ಮಾಡಿದ್ದನು.
ಹರಿಯಾಣದ ಜಜ್ಜರ್ನಲ್ಲಿರುವ ಆಕೆಯ ಕುಟುಂಬಕ್ಕೆ ಅವಳು ಎಲ್ಲಿದ್ದಾಳೆಂದು ತಿಳಿದಿರಲಿಲ್ಲ. ಆದರೆ, ಆಕೆಯ ನೆರೆಹೊರೆಯವರು ನಿಕ್ಕಿ ಯಾದವ್ ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದಾಗ ಆಕೆಗೆ ಸಾಹಿಲ್ ಎಂಬ ಸಹಬಾಳ್ವೆಯ ಗೆಳೆಯ ಇದ್ದ ಮಾಹಿತಿ ತಿಳಿದುಬಂದಿತ್ತು. ಸಾಹಿಲ್ನನ್ನು ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರಿಗೆ ಈ ಕೃತ್ಯ ಈತನೇ ನಡೆಸಿದ್ದಾನೆ ಎಂದು ತಿಪತ್ತೆಯಾಗಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ನಿಕ್ಕಿ ಮತ್ತು ಸಾಹಿಲ್ ಭೇಟಿಯಾಗಿದ್ದು, ಹಲವು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ತಂದೆ ಸುನೀಲ್ ಯಾದವ್ ಈ ಘಟನೆಯಿಂದ ಆಕ್ರೋಶಗೊಂಡಿದ್ದು, ಸಾಹಿಲ್ಗೆ ಮರಣದಂಡನೆ ವಿಧಿಸಬೇಕೆಂದು ಕೇಳಿಕೊಂಡಿದ್ದಾರೆ.