ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಂದು ಇರಿಸಲಾಗಿದೆ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಶ್ರೀಗಂಧ ನೀತಿ-2022ಕ್ಕೆ ( Sandalwood Policy-2022 ) ಅನುಮೋದನೆ ನೀಡಲಾಗಿದೆ.
ಇದರಿಂದಾಗಿ ರೈತರು ಶ್ರೀಗಂಧ ಬೆಳೆದು, ಮುಕ್ತ ಮಾರುಕಟ್ಟೆಯಲ್ಲಿ ಶ್ರೀಗಂಧ ಮಾರಾಟ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ರಾಜ್ಯದ ರೈತರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಲಾಗಿದೆ.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ( Karnataka Cabinet Meeting ) ನಡೆಯಿತು. ಈ ಸಭೆಯ ಬಳಿಕ ಸಂಪುಟ ಸಭೆಯ ನಿರ್ಧಾರಗಳನ್ನು ಸುದ್ದಿಗಾರರೊಂದಿಗೆ ಸಚಿವ ಡಾ.ಕೆ ಸುಧಾಕರ್ ಹಂಚಿಕೊಂಡರು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಶ್ರೀಗಂಧ ನೀತಿ-2022ಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ರಾಜ್ಯ ಸರ್ಕಾರದಿಂದ ಶ್ರೀಗಂಧ ನೀತಿ-2022ಕ್ಕೆ ಅನುಮೋದನೆ ನೀಡಿದ್ದರಿಂದಾಗಿ ಇನ್ಮುಂದೆ ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಶ್ರೀಗಂಧ ಮಾರಾಟ ಮಾಡಬಹುದಾಗಿದೆ. ಜಾಗತಿಕ ಮಟ್ಟದಲ್ಲಿ ಶ್ರೀಗಂಧಕ್ಕೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಶ್ರೀಗಂಧ ನೀತಿ ಸರಳೀಕರಣ ಮಾಡಿದ್ದೇವೆ ಎಂದು ಹೇಳಿದರು.