ಬೆಂಗಳೂರು : ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮೇ 20ರಂದು ಮಧ್ಯಾಹ್ನ 12.30 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಭಾಗಿಯಾಗುವಂತೆ ವಿವಿಧ ರಾಜ್ಯಗಳ ಬಿಜೆಪಿಯೇತರ ಮುಖ್ಯಮಂತ್ರಿಗಳು ಹಾಗೂ ಪಕ್ಷಗಳ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕೆಲ ಸಚಿವರು ಸಹ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಸ್ವೀಕರಿಸಲಿದ್ದು, ಲಕ್ಷಕ್ಕೂ ಹೆಚ್ಚಿನ ಮಂದಿ ಸಾಕ್ಷಿಯಾಗಲಿರುವ ಬೃಹತ್ ಕಾರ್ಯಕ್ರಮಕ್ಕೆ ಗುರುವಾರದಿಂದಲೇ ಸಿದ್ಧತೆಗಳನ್ನು ಆರಂಭಿಸಲಾಗಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಕುರ್ಚಿಗಳು ಮತ್ತು ವೇದಿಕೆಯ ನಿರ್ಮಾಣ ಸಾಮಗ್ರಿ ತಂದಿಡಲಾಗಿದೆ. ಜತೆಗೆ ಮ್ಯಾಟ್ ಅಳವಡಿಕೆಯನ್ನೂ ಮಾಡಲಾಗುತ್ತಿದೆ. ಶುಕ್ರವಾರದಿಂದಲೇ ವೇದಿಕೆ ಜೋಡಿಸುವ ಕಾರ್ಯ ಆರಂಭವಾಗಲಿದೆ. ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರೀಡಾಂಗಣದಲ್ಲಿ ಸುಮಾರು 35,000 ಸೀಟುಗಳ ವ್ಯವಸ್ಥೆ ಇದೆ. ಇದರಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಆಹ್ವಾನಿತರಿಗೆ ಅವಕಾಶ ನೀಡಿ ಉಳಿದ ಜಾಗದಲ್ಲಿ ಸಾರ್ವಜನಿಕರು ಕೂರಲು ವ್ಯವಸ್ಥೆ ಮಾಡಲಾಗುತ್ತದೆ. ಉಳಿದಂತೆ ಮೈದಾನಕ್ಕೆ ಮ್ಯಾಟ್ ಹಾಕಲಾಗುತ್ತಿದ್ದು, ಅಲ್ಲೂ ಕುರ್ಚಿಗಳನ್ನು ಅಳವಡಿಸುವ ಮೂಲಕ ಸುಮಾರು 1 ಲಕ್ಷ ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸುವತ್ತ ಕೆಲಸ ಮಾಡಲಾಗುತ್ತಿದೆ. ಬಿಜೆಪಿಯೇತರ ಸಿಎಂ, ನಾಯಕರು ಭಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಿಧ ರಾಜ್ಯಗಳ ಬಿಜೆಪಿಯೇತರ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ.
ಪ್ರಮುಖವಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಹಿಮಾಚಲ ಪ್ರದೇಶ ಸಿಎಂ ಸುಖ್‌ವಿಂದರ್ ಸಿಂಗ್ ಸುಖು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರಿಗೆ ಆಹ್ವಾನ ನೀಡಲಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರು ತಮ್ಮ ಪರವಾಗಿ ಪ್ರತಿನಿಧಿಯನ್ನು ಕಳುಹಿಸುವ ಸಾಧ್ಯತೆಗಳಿವೆ. ಅವರ ಜತೆಗೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಕೂಡ ಕಾರ್ಯಕ್ರಮದಲ್ಲಿ ಭಾಗಹಿಸಲಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ‘ಎಲ್ಲ ಸಮಾನ ಮನಸ್ಕ ಪಕ್ಷಗಳ ನಾಯಕರಿಗೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
3,000ಕ್ಕೂ ಅಧಿಕ ಪೊಲೀಸರ ನಿಯೋಜನೆ: ಕಾರ್ಯಕ್ರಮ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಕ್ರೀಡಾಂಗಣ ಸುತ್ತಮುತ್ತ ಬಿಗಿ ಬಂದೋಬಸ್‌್ತ ಏರ್ಪಡಿಸಲಾಗಿದೆ. ಕ್ರೀಡಾಂಗಣದ ಒಳಭಾಗದಲ್ಲಿ ಬರಲಾಗದವರಿಗಾಗಿ ಕ್ರೀಡಾಂಗಣದ ಹೊರ ಭಾಗದಲ್ಲಿ ಟಿವಿ ಪರದೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಜತೆಗೆ ಭದ್ರತೆಗಾಗಿ ಕೆಎಸ್‌ಆರ್‌ಪಿ, ಗೃಹರಕ್ಷಕ ದಳ, ಸಂಚಾರಿ ಪೊಲೀಸ್ ಸಿಬ್ಬಂದಿ ಸೇರಿ 3 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ವಿಶೇಷ ಪೊಲೀಸ್ ಆಯುಕ್ತ ಎಂ.ಎ. ಸಲೀಂ, ಕೇಂದ್ರ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗುತ್ತಿದೆ. ಪ್ರತಿಯೊಬ್ಬರನ್ನೂ ಮೆಟಲ್ ಡಿಟೆಕ್ಟರ್‌ನಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರವೇ ಸಿದ್ಧತೆ ನಡೆದಿತ್ತು: ಮುಖ್ಯಮಂತ್ರಿ ಆಯ್ಕೆ ಬೆಳವಣಿಗೆಗಳ ನಡುವೆ ಬುಧವಾರವೇ ಮುಖ್ಯಮಂತ್ರಿ ಆಯ್ಕೆ ಖಚಿತವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆ ಹಿನ್ನೆಲೆಯಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಬುಧವಾರವೇ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭಿಸಲಾಗಿತ್ತು. ಆದರೆ ಕೆಲ ಹೊತ್ತಿನಲ್ಲೇ ಮುಖ್ಯಮಂತ್ರಿ ಆಯ್ಕೆಯಾಗಿಲ್ಲ ಎಂಬ ಸುದ್ದಿ ಹೊರಬಿದ್ದ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ತಡೆಯಲಾಗಿತ್ತು. ಗುರುವಾರ (ಮೇ 18) ಮುಖ್ಯಮಂತ್ರಿ ಆಯ್ಕೆ ಪ್ರಹಸನ ಮುಗಿದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಘೋಷಣೆಯಾದ ಹಿನ್ನೆಲೆಯಲ್ಲಿ ಮತ್ತೆ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ.