ಮಂಗಳೂರು: ನಗರದ ಎನ್ಐಟಿಕೆ ಬಳಿಯಿರುವ ಸುರತ್ಕಲ್ ಟೋಲ್ ಗೇಟ್ ತೆರವಿಗೆ ಅ.18 ರಂದು ಮುತ್ತಿಗೆ ಹಾಕಿರುವ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಅ.28 ರಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದೆ.
ಸುರತ್ಕಲ್ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ಟೋಲ್ ಸಂಗ್ರಹ ಸ್ಥಗಿತಗೊಳ್ಳುವವರೆಗೂ ರಾಜಿಯಿಲ್ಲದೆ ಮುಂದುವರಿಸಲಾಗುತ್ತದೆ. ಅವಿಭಜಿತ ದ.ಕ. ಜಿಲ್ಲೆಯ ಜನತೆ ಟೋಲ್ ಗೇಟ್ ಮುತ್ತಿಗೆ ಹೋರಾಟದಲ್ಲಿ ಭಾಗವಹಿಸಿ ಒಕ್ಕೊರಲಿನಿಂದ ಆಗ್ರಹಿಸಿದರೂ ಬಿಜೆಪಿ ಸರಕಾರ ಟೋಲ್ ಸಂಗ್ರಹ ಸ್ಥಗಿತಗೊಳಿಸದೆ ಭಂಡತನ ಪ್ರದರ್ಶಿಸಿದೆ. ಪೊಲೀಸ್ ಬಲ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಿ, ಮುಖಂಡರನ್ನು ವಶಕ್ಕೆ ತೆಗೆದುಕೊಂಡಿದೆ. ಇದು ಬಿಜೆಪಿ ಸರಕಾರ, ಸಂಸದ, ಶಾಸಕರುಗಳ ಜನವಿರೋಧಿತನವನ್ನು ಎತ್ತಿತೋರಿಸಿದೆ ಎಂದು ಸಮಿತಿ ಆರೋಪಿಸಿದೆ.
ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆಗೆ ವ್ಯಾಪಕ ಜನಬೆಂಬಲದಿಂದ ಕಂಗೆಟ್ಟ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರು ಟೋಲ್ ಗೇಟ್ ಮುಚ್ಚಲು 15, 20 ದಿನಗಳ ಕಾಲಾವಕಾಶವನ್ನು ಕೋರಿದ್ದರು. ಆದರೆ ಟೋಲ್ ತೆರವಿಗೆ ಸಂಬಂಧಿಸಿ ಭರವಸೆಗಳನ್ನು ನೀಡಿ ಅದನ್ನು ಈಡೇರಿಸದೆ ಇರುವುದರಿಂದ ಜನತೆ ಇವರ ಮಾತಿನ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ಈಗಲೂ ಇವರ ಭರವಸೆಗಳನ್ನು ನಂಬಿ ಹೋರಾಟ ಸ್ಥಗಿತಗೊಳಿಸಿದರೆ ಸುರತ್ಕಲ್ ಟೋಲ್ ಸುಲಿಗೆ ಶಾಶ್ವತಗೊಳ್ಳಲಿದೆ. ಆದ್ದರಿಂದ ಹೋರಾಟ ಸಮಿತಿ ಟೋಲ್ ಗೇಟ್ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿದೆ.