ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 3000 ಧನಸಹಾಯ ನೀಡಲಾಗುತ್ತಿದೆ. ಆದ್ರೇ ಅನೇಕ ಮಹಿಳೆಯರಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ಈ ಹಣ ತಲುಪಿಲ್ಲ. ಹೀಗಾಗಿ ಡಿ.27ರ ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮಸ್ಯೆ ನಿವಾರಣೆಗೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ ಅನೇಕ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಕೆಲವರಿಗೆ ಯೋಜನೆಯಡಿ ಸಹಾಯಧನ ಸೌಲಭ್ಯ ದೊರೆತಿದ್ದರೇ, ಮತ್ತೆ ಕೆಲವರಿಗೆ ಸಿಕ್ಕಿಲ್ಲ. ಹೀಗಾಗಿ ತಾಂತ್ರಿಕ ಸಮಸ್ಯೆ ನಿವಾರಿಸಲು ಡಿಸೆಂಬರ್.27ರಿಂದ 29ರವರೆಗೆ ಮೂರು ದಿನಗಳ ಕಾಲ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಂತ ಮಹಿಳೆಯರು ಹೊಸ ಬ್ಯಾಂಕ್ ಖಾತೆ ಆರಂಭ, ಆಧಾರ್ ಜೋಡಣೆ, ಬ್ಯಾಂಕಿಗೆ ಸಂಬಂಧಿಸಿದಂತ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೂ ಬಂದಿದೆ. ಇಂತಹ ತೊಂದರೆಯನ್ನು ಪರಿಹರಿಸಿ, ಹಣ ಜಮಾವಣೆ ಮಾಡೋ ನಿಟ್ಟಿನಲ್ಲಿ ಡಿ.27ರಿಂದ ಮೂರು ದಿನ ಶಿಬಿರವನ್ನು ಆಯೋಜಿಸಲಾಗಿದೆ ಎಂದಿದ್ದಾರೆ.
ಗೃಹಲಕ್ಷ್ಮಿ ಫಲಾನುಭವಿಗಳ ಸಮಸ್ಯೆ ನಿವಾರಣೆಗಾಗಿ ಶಿಬಿರದಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಆಧಾರ್ ಜೋಡಣೆ ಮಾಡುವುದು, ಇ-ಕೆವೈಸಿ ಅಪ್ಡೆಟ್, ಗೃಹಲಕ್ಷ್ಮಿಅರ್ಜಿಯ ಸ್ಥಿತಿ ಪರಿಶೀಲನೆ ಮತ್ತು ಇನ್ನಿತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಲಾಗುವುದು, ಶಿಬಿರ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಡಿ.27ರಿಂದ ಡಿ.29ರ ವರೆಗೆ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜರುಗಲಿದೆ ಎಂದು ತಿಳಿಸಿದ್ದಾರೆ.