ಮಂಗಳೂರು: ವಾರದಲ್ಲಿ ಮೂರು ದಿನ ಮಂಗಳೂರು -ಬೆಂಗಳೂರು ವಿಶೇಷ ರಾತ್ರಿ ರೈಲು ಸೇವೆ ಆರಂಭಿಸಲಾಗುವುದು. ಜುಲೈ 27 ರಿಂದ ಆಗಸ್ಟ್ 31 ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮಂಗಳೂರಿನಿಂದ ಬೆಂಗಳೂರು ನಗರಕ್ಕೆ ರೈಲು ಸಂಚರಿಸಲಿದೆ.
ಜುಲೈ 26 ರಿಂದ ಆಗಸ್ಟ್ 30ರವರೆಗೆ ಪ್ರತಿ ಭಾನುವಾರ, ಮಂಗಳವಾರ, ಗುರುವಾರ ಬೆಂಗಳೂರಿನಿಂದ ಮಂಗಳೂರಿಗೆ ರೈಲು ಸಂಚರಿಸಲಿದೆ.
ಭಾರಿ ಮಳೆಯ ಕಾರಣ ಬೆಂಗಳೂರು -ಮಂಗಳೂರು ಹೆದ್ದಾರಿ ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ಬೇಡಿಕೆ ಬಂದಿದೆ. ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಅನುಕೂಲವಾಗುವಂತೆ, ಮಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಡುವೆ ಮೈಸೂರು ಮಾರ್ಗದಲ್ಲಿ ಜನವರಿ 26ರಿಂದ ಆಗಸ್ಟ್ 31ರವರೆಗೆ ವಾರದಲ್ಲಿ ಮೂರು ದಿನ ವಿಶೇಷ ರಾತ್ರಿ ರೈಲು ಸೇವೆಗೆ ರೈಲ್ವೆ ಮಂಡಳಿಯಿಂದ ಅನುಮೋದನೆ ನೀಡಲಾಗಿದೆ.
ಭಾರಿ ಮಳೆ ಮತ್ತು ಭೂಕುಸಿತದ ಕಾರಣ ರಸ್ತೆ ಸಂಚಾರಕ್ಕೆ ತೊಂದರೆಯಾಗಿರುವುದರಿಂದ ಹೆಚ್ಚುವರಿ ರೈಲು ಒದಗಿಸಲು ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಿದ್ದು, ಸಂಸದರು ರೈಲ್ವೆ ಸಚಿವರನ್ನು ಭೇಟಿಯಾಗಿ ಹೆಚ್ಚುವರಿ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದರು.
ರಾತ್ರಿ 8.30 ಕ್ಕೆ ಬೆಂಗಳೂರಿನಿಂದ ಹೊರಡಲಿರುವ ರೈಲು ಕೆಂಗೇರಿ, ರಾಮನಗರ, ಚನ್ನರಾಯಪಟ್ಟಣ, ಮಂಡ್ಯ, ಮೈಸೂರು ಜಂಕ್ಷನ್, ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ತಲುಪಲಿದೆ. ಮಂಗಳೂರಿನಿಂದ ಸಂಜೆ 6:35ಕ್ಕೆ ಹೊರಡುವ ರೈಲು ಬೆಳಗ್ಗೆ 6.15ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ ತಲುಪಲಿದೆ.