ಕುಂದಾಪುರ: ಮಹಿಳೆಯೊಬ್ಬರು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ರವಿವಾರ ನಡೆದಿದೆ.
ಬೀಜಾಡಿ ಗ್ರಾಮದ ಕೋಟೇಶ್ವರ ಎಂಬಲ್ಲಿರುವ ಫ್ಯಾಶನ್ ಡಿಸೈನ್ ಟೈಲರ್ ಮತ್ತು ಫ್ಯಾನ್ಸಿ ಸ್ಟೋರ್ಸ್ ಎಂಬ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಸಾಮಗ್ರಿಗಳನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದಾಗಿ ಕರೆ ಬಂದ ಹಿನ್ನೆಲೆಯಲ್ಲಿ ಎಸ್ಸೈ ವಿನಯ್ ಕೊರ್ಲಹಳ್ಳಿ ಸ್ಥಳಕ್ಕೆ ತೆರಳಿ ಅಂಗಡಿಯಲ್ಲಿದ್ದ ಸರೋಜ ದಾಸ್(43) ಎಂಬವರನ್ನು ವಿಚಾರಿಸಿದರು. ಆಗ ಮಹಿಳೆ ಉದ್ದಟತನದಿಂದ ಮಾತನಾಡಿ ಎಸ್ಸೈಗೆ ಹೊಡೆ ಯಲು ಬಂದಿರುವುದಾಗಿ ದೂರಲಾಗಿದೆ.
ಬಳಿಕ ಏಕಾಏಕಿ ಬಾಟಲಿಯಿಂದ ಸೀಮೆ ಎಣ್ಣೆಯನ್ನು ಮೈಗೆ ಎರಚಲು ಬಂದಾಗ ಎಸ್ಸೈ ತಪ್ಪಿಸಿಕೊಂಡಿದ್ದಾರೆನ್ನಲಾಗಿದೆ. ನಂತರ ಆಕೆ ಸೀಮೆಎಣ್ಣೆಯನ್ನು ಅಲ್ಲಿಯೇ ಕೆಳಗೆ ಹಾಕಿ ಬೆಂಕಿ ಹಾಕಿದ್ದು, ಆಗ ಎಸ್ಸೈ ಮತ್ತು ಸಿಬ್ಬಂದಿ ನಂದಿಸಲು ಮುಂದಾದಾಗ ಆಕೆಯು ಸಮವಸ್ತ್ರಕ್ಕೆ ಕೈ ಹಾಕಿ ಎಳೆದು ದೂಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.