ನವದೆಹಲಿ: ಬೀದಿ ನಾಯಿಗಳಿಗೆ ಆಹಾರ ನೀಡುವವರನ್ನೇ ಅವುಗಳ ಲಸಿಕೆಗೆ ಜವಾಬ್ದಾರರನ್ನಾಗಿ ಮಾಡಬಹುದು ಮತ್ತು ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ಆ ವೆಚ್ಚವನ್ನು ಅವುಗಳಿಗೆ ಊಟ ಹಾಕಿ ಸಲಹಿದವರೇ ಭರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆಕೆ ಮಹೇಶ್ವರಿ ಅವರಿದ್ದ ಪೀಠ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದ್ದು, ನಮ್ಮಲ್ಲಿ ಹೆಚ್ಚಿನವರು ನಾಯಿ ಪ್ರಿಯರು. ನಾನು ಕೂಡ ನಾಯಿಗಳಿಗೆ ಆಹಾರ ನೀಡುತ್ತೇನೆ. ಜನರು ಬಯಸಿದರೆ ಶ್ವಾನಗಳನ್ನು ನೋಡಿಕೊಳ್ಳಲಿ ಆದರೆ ಅವುಗಳನ್ನು ಗುರುತಿಸಬೇಕು, ಚಿಪ್ ಮೂಲಕ ಟ್ರ್ಯಾಕ್ ಮಾಡಬಾರದು ಎಂದಿದ್ದಾರೆ.
ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿದೆ.