ಮಂಗಳೂರು: ಸುರತ್ಕಲ್‌ನ ಎನ್‌ಐಟಿಕೆ ಕಾಲೇಜಿನಲ್ಲಿ ಮತ ಎಣಿಕೆಗೂ ಮುನ್ನ ಸ್ಟ್ರಾಂಗ್ ರೂಂ ತೆರೆಯುವ ವೇಳೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಂನ ಬೀಗದ ಕೀಯನ್ನು ಅಧಿಕಾರಿಗಳು ಕಳೆದುಹಾಕಿದ್ದರು. ಕೊನೆಗೆ ಜಿಲ್ಲಾಧಿಕಾರಿ ಬಡಗಿಯನ್ನು ಕರೆಸಿ ಬೀಗ ತುಂಡರಿಸಿದ ಘಟನೆಯೂ ನಡೆಯಿತು. ಸದ್ಯ ಅಂಚೆ ಮತ ಎಣಿಕೆ ಆರಂಭವಾಗಿದ್ದು, ಭಾರೀ ಭದ್ರತೆ ಏರ್ಪಡಿಸಲಾಗಿದೆ.
ದ.ಕ ಜಿಲ್ಲೆಯ ಎಂಟು ಕ್ಷೇತ್ರಗಳ ಒಟ್ಟು 60 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 8 ಕ್ಷೇತ್ರಗಳ ಇವಿಎಂಗೆ ಒಟ್ಟು 112 ಹಾಗೂ ಪೋಸ್ಟಲ್ ಬ್ಯಾಲೆಟ್ ಗೆ 40 ಟೇಬಲ್ ಅಳವಡಿಕೆ ಮಾಡಲಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಇವಿಂಗೆ 14 ಟೇಬಲ್ ಗಳನ್ನು ಹಾಕಲಾಗಿದೆ. ಪೋಸ್ಟಲ್ ಬ್ಯಾಲೆಟ್ ಗಾಗಿ 5 ಟೇಬಲ್ ಗಳನ್ನ ಮಾಡಲಾಗಿದೆ.
ಬೆಳಿಗ್ಗೆ 8 ಗಂಟೆಗೆ ಮೊದಲು ಪೋಸ್ಟಲ್ ಬ್ಯಾಲೆಟ್ ಎಣಿಕೆ ಆರಂಭವಾಗಿದ್ದು, 8.30ರಿಂದ ಇವಿಎಂ ಮತ ಎಣಿಕಾ ಕಾರ್ಯ ಆರಂಭವಾಗಲಿದೆ. ಪ್ರತೀ ಕ್ಷೇತ್ರದ 19 ಟೇಬಲ್ ಗೂ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಒಟ್ಟು 16 ರಿಂದ 18 ಸುತ್ತುಗಳಲ್ಲಿ ಎಣಿಕಾ ಕಾರ್ಯ ಶುರು ಮಾಡಲಾಗಿದೆ. 544 ಸಿಬ್ಬಂದಿ ಇಡೀ ಎಣಿಕಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
304 ಹೆಡ್ ಕಾನ್ಸ್‌ಟೇಬಲ್, 39 ಎಎಸ್ಸೈ, 35 ಪಿಎಸ್ಸೈ, 14 ಇನ್ಸ್ಪೆಕ್ಟರ್, 06 ಎಸಿಪಿ, 2 ಡಿಸಿಪಿ, 400 ಸಿವಿಲ್ ಪೊಲೀಸ್, 200 ಹೋಂ ಗಾರ್ಡ್, 4 ಸಿಎಆರ್ ತುಕಡಿ, 2 ಕೆಎಸ್ಸಾರ್ಪಿ ತುಕಡಿ ಹಾಗೂ ಸಿಆರ್ಪಿಎಫ್, ಸಿಐಎಸ್ಎಫ್ ಭದ್ರತೆ ಕೈಗೊಳ್ಳಲಾಗಿದೆ.
ಮಂಗಳೂರು -15, ಮಂಗಳೂರು ದಕ್ಷಿಣ- 18, ಮಂಗಳೂರು ಉತ್ತರ- 18, ಬೆಳ್ತಂಗಡಿ- 18, ಮೂಡಬಿದ್ರೆ- 16, ಬಂಟ್ವಾಳ- 18, ಪುತ್ತೂರು-16, ಸುಳ್ಯ- 17 ಸುತ್ತು ಮತ ಎಣಿಕೆ ಮಾಡಲಾಗುತ್ತಿದೆ.