ಮೂಡಬಿದಿರೆ : ಶಂಕಿತ ಡೆಂಗ್ಯೂ ಜ್ವರಕ್ಕೆ ಪ್ರಥಮ ಪಿಯುಸಿ ಓದುತ್ತಿರುವ ವಿಧ್ಯಾರ್ಥಿನಿ ಸಾವನಪ್ಪಿರುವ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ. ಮೃತ ವಿಧ್ಯಾರ್ಥಿನಿಯನ್ನು ಜ್ಯೋತಿನಗರ ನಿವಾಸಿ ಮಿಸ್ರಿಯಾ (17) ಎಂದು ಗುರುತಿಸಲಾಗಿದೆ. ಮಿಸ್ರಿಯಾ ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದರು.
ಮಿಸ್ರಿಯಾ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು, ಬಿಳಿ ರಕ್ತ ಕಣಗಳ ಕುಸಿತ ಕಂಡುಬಂದಿರುವುದರಿಂದ ಸಾವು ಸಂಭವಿಸಿದ್ದು, ಇದು ಡೆಂಗ್ಯೂ ಪ್ರಕರಣ ಎಂದು ಶಂಕಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ಸರಕಾರಿ ಆಸ್ಪತ್ತೆಗಳಲ್ಲಿ ಡೆಂಗ್ಯೂ ಸಹಿತ ಮಲೇರಿಯಾ ಪ್ರಕರಣಗಳು ದಾಖಲಾಗಿದ್ದಲ್ಲಿ ಕೂಡಲೇ ಮಾಹಿತಿ ಲಭಿಸುತ್ತದೆ. ಖಾಸಗಿ ಆಸ್ಪತ್ರೆಗಳಿಂದ ಮಲೇರಿಯಾ ಕೇಂದ್ರಕ್ಕೆ ವರದಿ ಬಂದ ಬಳಿಕವಷ್ಟೇ ನಮಗೆ ಮಾಹಿತಿ ಸಿಗಲು ಸಾಧ್ಯ ಮತ್ತು ಆ ಕುರಿತು ಸೂಕ್ತ ಸಮೀಕ್ಷೆ, ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ. ಮಿಸ್ರಿಯಾ ಪ್ರಕರಣ ಇನ್ನಷ್ಟೇ ಮಲೇರಿಯಾ ಕೇಂದ್ರಕ್ಕೆ ವರದಿಯಾಗಬೇಕಿದೆ. ಇದು ಡೆಂಗ್ಯೂ ನಿಂದಾದ ಸಾವು ಎಂದು ದೃಢಪಟ್ಟಲ್ಲಿ ಮೂಡುಬಿದಿರೆ ತಾಲೂಕಿನಲ್ಲಿ ಇದೇ ಈ ಸಾಲಿನ ಮೊದಲ ಪ್ರಕರಣ. ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ್ದಾರೆ.