ಕುಂದಾಪುರ: ಶನಿವಾರ ಬೆಳಿಗ್ಗೆ ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ವೇಳೆ ಬಸ್ಸಿನಿಂದ ಆಯತಪ್ಪಿ ಬಸ್ ಚಕ್ರದಡಿ ಬಿದ್ದು ಮೃತಪಟ್ಟ ಕಾಲೇಜು ವಿದ್ಯಾರ್ಥಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಆತನ ಪೋಷಕರು ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಹೆಮ್ಮಾಡಿ ಸಮೀಪದ ಕಟ್ ಬೇಲ್ತೂರು ನಿವಾಸಿಗಳಾದ ನಾಗಪ್ಪ ಪೂಜಾರಿ ಜಲಜಾ ದಂಪತಿಗಳ ಪುತ್ರ ಸುದೀಪ್ ಪೂಜಾರಿ (20) ಯವರ ನೇತ್ರದಾನ ಮಾಡಲಾಗಿದೆ.
ಶನಿವಾರ ಬೆಳಿಗ್ಗೆ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ನಲ್ಲಿ ಮನೆಯಾದ ಕಟ್ ಬೆಲ್ತೂರಿನಿಂದ ಸುದೀಪ್ ಸಂಚರಿಸುತ್ತಿದ್ದಾಗ ಹೆಮ್ಮಾಡಿ ಜಂಕ್ಷನ್ ಬಳಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬಸ್ ಮುಂಬದಿಯ ಬಾಗಿಲಲ್ಲಿ ನಿಂತಿದ್ದ ಸುದೀಪ್ ಬಸ್ ನ ಮುಂದಿನ ಚಕ್ರದಡಿಯಲ್ಲಿ ಸಿಲುಕಿ ಗಂಭೀರ ಗಾಯಗೊಂಡು ಆತ ಮೃತಪಟ್ಟಿದ್ದ.
ಬಸ್ ಅಪಘಾತದಲ್ಲಿ ಮೃತಪಟ್ಟ ಸುದೀಪ್ ಅವರ ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಿದ್ದು ನೇತ್ರ ತಜ್ಞೆ ಡಾ. ವಿಜಯಲಕ್ಷ್ಮಿ ಅವರು ನೇತ್ರದಾನದ ಮಹತ್ವದ ಬಗ್ಗೆ ಮೃತ ಸುದೀಪ್ ಪೂಜಾರಿ ಪೋಷಕರ ಬಳಿ ತಿಳಿಸಿದ್ದು ಇದಕ್ಕೆ ಪೋಷಕರು ಸಮ್ಮತಿ ಸೂಚಿಸಿದ ಹಿನ್ನೆಲೆ ಮಣಿಪಾಲದ ನುರಿತ ತಜ್ಞರ ತಂಡ ಆಸ್ಪತ್ರೆಗೆ ಆಗಮಿಸಿ ಪ್ರಕ್ರಿಯೆ ನಡೆಸಿದ್ದಾರೆ ಎಂದು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ತಿಳಿಸಿದ್ದಾರೆ.
ಮೃತ ಸುದೀಪ್ ಪೂಜಾರಿ ಬಡತನದ ಕುಟುಂಬದವರಾಗಿದ್ದು ತಂದೆ-ತಾಯಿ ಜೊತೆ ಮನೆಯಲ್ಲಿದ್ದು ಕೋಟೇಶ್ವರ ಕಾಗೇರಿಯಲ್ಲಿರುವ ಕಾಳಾವಾರ ವರದರಾಜ ಎಂ. ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಹಿರಿಯ ಸೋದರ ಹಾಗೂ ಸೋದರಿ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿ ಉದ್ಯೋಗಿಗಳಾಗಿದ್ದಾರೆ. ವೈದ್ಯರ ಸಲಹೆಯಂತೆ ಮಗನ ಕಣ್ಣುಗಳು ಇನ್ನೊಬ್ಬರ ಜೀವಕ್ಕೆ ಬೆಳಕಾಗಲಿ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಿರುವುದಾಗಿ ಕುಟುಂಬ ಮೂಲಗಳು ತಿಳಿಸಿದೆ.