ಸುಬ್ರಹ್ಮಣ್ಣ: ಕುಕ್ಕೆ ಕ್ಷೇತ್ರದಿಂದ ಅನತಿ ದೂರದಲ್ಲಿರುವ ನೂಚಿಲದ ಗುಡ್ಡ ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ ಅಲ್ಲಿನ 8 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂರಿಸಲಾಗಿದೆ. ಯಾವುದೇ ಸಮಯದಲ್ಲಿ ಈ ಗುಡ್ಡ ಕುಸಿಯುವ ಸಂಭವವಿದ್ದು ಮುಂಜಾಗ್ರತೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಭಯ ಪ್ರವಾಸಿ ಮಂದಿರದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ 8 ಕುಟುಂಬಗಳನ್ನು ಸ್ಧಳಾಂತರಿಸಲಾಗಿದೆ. ಗೀತಾ ಸತೀಶ್ ನೂಚಿಲ, ಪದ್ದಯ್ಯ ನೂಚಿಲ, ದುಗ್ಗಣ್ಣ ನೂಚಿಲ, ದಿನೇಶ್ ನೂಚಿಲ, ಶೋಭಾ ಭಾಸ್ಕರ ನೂಚಿಲ, ದೇವಕಿ ಬಾಲಕೃಷ್ಣ, ಶೋಭಾ ಪ್ರಮೋದ್ ಕುಮಾರ್ ಮತ್ತು ಬಿ.ಎನ್. ರಾಧಾಕೃಷ್ಣ ಅವರ ಮನೆಗಳು ಬೆಟ್ಟದ ತಪ್ಪಲ್ಲಿನಲ್ಲಿವೆ. ಕಡಬ ತಹಶೀಲ್ದಾರ್ ರಮೇಶ್ ಬಾಬು ಅವರು ಈ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿದ್ದು, ತಕ್ಷಣವೇ ಮನೆಗಳಿಂದ ತೆರವುಗೊಳಿಸಿ ಬೇರೆ ಕಡೆ ವಾಸ್ತವ್ಯ ಹೂಡಬೇಕು ಅಥವಾ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಸುಬ್ರಹ್ಮಣ್ಯದ ನೂಚಿಲದಲ್ಲಿ ಬೆಟ್ಟದ ತಪ್ಪಲಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳನ್ನು ಮಳೆಗಾಲ ಮುಗಿಯುವವರೆಗೆ ಬಳಸದಂತೆಯೂ ಸೂಚನೆ ನೀಡಲಾಗಿದೆ. ಎಸ್ಡಿಆರ್ಎಫ್ ತಂಡ ಸ್ಥಳ ಪರಿಶೀಲಿಸಿ ತಾಲೂಕು ಆಡಳಿತಕ್ಕೆ ಅಪಾಯದ ಕುರಿತಂತೆ ಮಾಹಿತಿ ನೀಡಿತ್ತು. ಬೃಹತ್ ಬೆಟ್ಟ ಇದಾಗಿದ್ದು, ಇದರ ಬುಡದಲ್ಲೇ ಈ ಮನೆಗಳಿವೆ. ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಈ ಕೈಗೊಳ್ಳಲಾಗಿದೆ. ಕಳೆದ ಮಳೆಗಾಲದಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಸಮೀಪದ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಹಿಂಬದಿಯ ಬೆಟ್ಟ ಕುಸಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.