ಹಿಂದೂ ಪರ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು 11 ಆರೋಪಿಗಳ ವಿರುದ್ಧ ಬೆಂಗಳೂರು ಎನ್‌ಐಎ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ದೇಶದ್ರೋಹ ಕಾಯ್ದೆ ಸೇರಿದಂತೆ ವಿವಿಧ ಕಾಯಿದೆಗಳಡಿ ಪ್ರಕರಣ ದಾಖಲಾಗಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 2025ರ ಮೇ 1ರಂದು ಸುಹಾಸ್ ಶೆಟ್ಟಿಯನ್ನು ಬಜ್ಜೆಯಲ್ಲಿ ನಡುರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು.
ಹಲವು ಸಮಯದಿಂದ ಹೊಂಚು ಹಾಕಿ ಜನರಲ್ಲಿ ಭಯ ಮೂಡಿಸುವುದಕ್ಕಾಗಿಯೇ ಈ ರೀತಿ ಭಯಾನಕವಾಗಿ ಕೊಲೆ ಮಾಡಲಾಗಿತ್ತು ಎಂದು ಎನ್‌ಐಎ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ.
ಸುಹಾಸ್ ಶೆಟ್ಟಿ ಕೊಲೆ ನಡೆಸುವುದಕ್ಕಾಗಿ ನಿಷೇಧಿತ ಪಿಎಫ್‌ಐ ಸಂಘಟನೆಯ ಮಾಜಿ ಸದಸ್ಯ ಅಬ್ದುಲ್ ಸಫಾನ್ ಎಂಬಾತ ನಿಯಾಜ್, ಮುಹಮ್ಮದ್ ಮುಸಾಮಿರ್, ಮಹಮ್ಮದ್ ಮುಜಾಮಿಲ್, ಇನ್ನೊಬ್ಬ ಪಿಎಫ್‌ಐ ಸದಸ್ಯ ವಾಮಂಜೂರು ನೌಶಾದ್ ಮತ್ತು ಆದಿಲ್ ಮಹರೂಫ್ ಜೊತೆಗೂಡಿ ಸಂಚು ನಡೆಸಿದ್ದರು. ಕೃತ್ಯ ನಡೆಸುವುದಕ್ಕಾಗಿ ಆದಿಲ್ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿದ್ದ ಎಂದು ಎನ್‌ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಕಲಂದರ್ ಶಾಫಿ, ರಂಜಿತ್, ನಾಗರಾಜ, ಮಹಮ್ಮದ್ ರಿಜ್ವಾನ್, ಅಜರುದ್ದೀನ್, ಅಬ್ದುಲ್ ಖಾದರ್ ಅವರನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿ ಆರೋಪ ಹೊರಿಸಲಾಗಿದೆ. ಇನ್ನೊಬ್ಬ ಆರೋಪಿ ಅಬ್ದುಲ್ ರಜಾಕ್ ಬಗ್ಗೆ ತನಿಖೆ ನಡೆಯುತ್ತಿದ್ದು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಕೋರ್ಟಿಗೆ ಎನ್‌ಐಎ ತಿಳಿಸಿದೆ.




