ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ವಿಶೇಷ ನ್ಯಾಯಾಧೀಶರು ಅಪರಾಧದ ವಿಚಾರಣೆ ಅಂಗೀಕರಿಸಿ ಆರೋಪಿಯ ವಿರುದ್ಧ ದೋಷಗಳನ್ನು ಪಟ್ಟಿ ಮಾಡಿದ ನಂತರ ಪೂರ್ವಾನುಮತಿಯ ಅಲಭ್ಯತೆ ಅಥವಾ ಅಮಾನ್ಯತೆಯ ಕಾರಣದಿಂದ ಆ ಪ್ರಕರಣದ ವಿಚಾರಣೆಯನ್ನು ಮಧ್ಯದಲ್ಲಿ ನಿಲ್ಲಿಸುವಂತಿಲ್ಲ ಅಥವಾ ತಡೆಯಾಜ್ಞೆ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನು ಒಳಗೊಂಡ ಪೀಠವು, ‘ವಿಚಾರಣೆಯ ಮಧ್ಯದಲ್ಲಿ ಪ್ರಕರಣ ರದ್ದುಗೊಳಿಸುವ ಮಧ್ಯಂತರ ಅರ್ಜಿಯು ವಿಚಾರಣೆಗೆ ಯೋಗ್ಯವಲ್ಲ. ಆದರೆ, ಪೂರ್ವಾನುಮತಿಯ ಮಂಜೂರಾತಿ ಬಗ್ಗೆ ವಿಚಾರಣೆಯ ಕೊನೆಯ ವಾದ ಪ್ರತಿವಾದದ ವೇಳೆ ಪ್ರಸ್ತಾಪಿಸಬಹುದು’ ಎಂದು ತಿಳಿಸಿದೆ.
ಪೂರ್ವಾನುಮತಿ ಮಾನ್ಯತೆ ಕುರಿತು ಪ್ರಶ್ನೆಗಳಿದ್ದಲ್ಲಿ ಅದನ್ನು ಪ್ರಕರಣದ ವಿಚಾರಣೆ ಆರಂಭಿಸುವ ಮೊದಲೇ ಗಮನಕ್ಕೆ ತರುವುದು ಉತ್ತಮ ಎಂದು ಪೀಠ ಹೇಳಿದೆ.
2018ರ ಆಗಸ್ಟ್ 16ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13 (2)ರೊಂದಿಗೆ ಸೆಕ್ಷನ್ 13 (1) (ಇ) ಅಡಿಯಲ್ಲಿ ದಾಖಲಾದ ದೋಷಾರೋಷಗಳನ್ನು ಖುಲಾಸೆಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಲೋಕಾಯುಕ್ತ ಮೇಲ್ಮನವಿ ಸಲ್ಲಿಸಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎ.ಸುಬ್ಬೇಗೌಡ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗೆ ಪಡೆದಿರುವ ಪೂರ್ವಾನುಮತಿ ಕಾನೂನುಬಾಹಿರ ಹಾಗೂ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು