ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ.
ದಿನಕ್ಕೊಂದು ಟೀ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.
ಅವರವರ ರುಚಿ ಮತ್ತು ಆರೋಗ್ಯಕ್ಕೆ ತಕ್ಕಂತೆ ಗ್ರೀನ್ ಟೀ, ಬ್ಲಾಕ್ ಟೀ, ಲೆಮನ್ ಟೀ, ಹಾಲಿನ ಟೀ ಕುಡಿಯುತ್ತಾರೆ. ಹೆಚ್ಚಿನವರು ಹಾಲಿನ ಚಹಾವನ್ನು ಇಷ್ಟಪಡುತ್ತಾರೆ. ಹಾಲಿಗೆ ಹೆಚ್ಚು ಚಹಾ ಎಲೆಗಳನ್ನು ಸೇರಿಸಿ ಮತ್ತು ದೀರ್ಘಕಾಲದವರೆಗೆ ಕುದಿಸಿ ತಯಾರಿಸಿದ ಚಹಾವನ್ನು ಇಷ್ಟಪಡುವ ಇದ್ದಾರೆ. ಆದಾಗ್ಯೂ, ದೀರ್ಘಕಾಲದವರೆಗೆ ಚಹಾವನ್ನು ಕುದಿಸುವುದು ಅನೇಕ ಹಾನಿಕಾರಕ ಸಂಯುಕ್ತಗಳನ್ನು ಉಂಟುಮಾಡುತ್ತದೆ. ಅತಿಯಾಗಿ ಕುದಿಸಿದ ಚಹಾವು ಸ್ಲೋ ಪಾಯಿಸನ್ ಆಗಿ ಪರಿವರ್ತನೆಯಾಗಬಹುದು ಎಂದು ಪೌಷ್ಟಿಕತಜ್ಞರು ಎಚ್ಚರಿಸಿದ್ದಾರೆ.
ಚಹಾವನ್ನು ಎಷ್ಟು ಹೊತ್ತು ಕುದಿಸಬೇಕು?
ಚಹಾವನ್ನು ಟೇಸ್ಟ್ ಮತ್ತು ಆರೋಗ್ಯಕರವಾಗಿಸಲು ಕೇವಲ 4 ರಿಂದ 5 ನಿಮಿಷಗಳ ಕಾಲ ಕುದಿಸಬೇಕು. ಅದಕ್ಕಿಂತ ಹೆಚ್ಚು ಕುದಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ದೀರ್ಘಕಾಲ ಕುದಿಸುವಿಕೆಯ ಪರಿಣಾಮಗಳೇನು?
* ಹಾಲಿನ ಚಹಾವನ್ನು ದೀರ್ಘಕಾಲದವರೆಗೆ ಕುದಿಸುವುದರಿಂದ ಅದರಲ್ಲಿರುವ ಟ್ಯಾನಿನ್‌ಗಳ ಪ್ರಮಾಣವನ್ನು ಹೆಚ್ಚಾಗುತ್ತದೆ. ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುತ್ತದೆ. ಅಲ್ಲದೆ, ಹೆಚ್ಚಿನ ಟ್ಯಾನಿನ್ ಅಂಶವು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಉಂಟುಮಾಡುತ್ತದೆ. ಇದರಿಂದ ರಕ್ತಹೀನತೆ ಬರುವ ಸಾಧ್ಯತೆ ಇದೆ.
* ಅತಿಯಾಗಿ ಕುದಿಸುವ ಹಾಲಿನ ಚಹಾವು ಅದರ pH ಅನ್ನು ಬದಲಾಯಿಸುತ್ತದೆ. ಚಹಾವು ಹೆಚ್ಚು ಆಮ್ಲೀಯವಾಗುತ್ತದೆ.
* ಅತಿಯಾಗಿ ಕುದಿಸುವ ಹಾಲಿನ ಚಹಾವು ಅಕ್ರಿಲಾಮೈಡ್ ಅನ್ನು ಉತ್ಪಾದಿಸುತ್ತದೆ. ಇದು ಕ್ಯಾನ್ಸರ್ ಉಂಟುಮಾಡುವ ವಸ್ತುವಾಗಿದ್ದು, ಆರೋಗ್ಯಕ್ಕೆ ಹಾನಿಕಾರಕವಾಗಿದೆ.
* ತುಂಬಾ ಹೊತ್ತು ಹಾಲಿನೊಂದಿಗೆ ಕುದಿಸಿದ ಚಹಾ ಕುಡಿಯುವುದರಿಂದ ಅಸಿಡಿಟಿ, ಹೊಟ್ಟೆನೋವು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗಬಹುದು.
* ಕುದಿಸಿದ ಚಹಾವನ್ನು ಮತ್ತಷ್ಟು ಕುದಿಸುವುದರಿಂದ ಅದರಲ್ಲಿ ಟ್ಯಾನಿನ್ ಪ್ರಮಾಣ ಹೆಚ್ಚಾಗಿ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
* ಅತಿಯಾಗಿ ಕುದಿಸುವುದುರಿಂದ ಟೀ ತನ್ನ ರುಚಿಯನ್ನು ಕಳೆದುಕೊಳ್ಳುತ್ತದೆ.
* ಹೆಚ್ಚು ಸಮಯ ಕುದಿಸಿದ ಹಾಲಿನ ಚಹಾವು ಹಾಲಿನಲ್ಲಿರುವ ಅನೇಕ ಪೋಷಕಾಂಶಗಳಾದ ಪ್ರೋಟೀನ್, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅನ್ನು ನಾಶಪಡಿಸುತ್ತದೆ.