ಕಾಪು: ಹತ್ತು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಾಪು ಪೊಲೀಸರು ಮುಂಬಯಿಯಲ್ಲಿ ಬಂಧಿಸಿ, ಕರೆ ತಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉದ್ಯಾವರ ಅಂಕುದ್ರು ನಿವಾಸಿ ಗಣೇಶ್ ಪೂಜಾರಿ (44) ಬಂಧಿತ ಆರೋಪಿ.
2013 ಮತ್ತು 2014ರಲ್ಲಿ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯು ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ವಾರಂಟ್ ಮತ್ತು ಪ್ರೋಕ್ಲಮೇಷನ್ ಹೊರಡಿಸಲಾಗಿತ್ತು.
ಆರೋಪಿಯನ್ನು ಕಾಪು ಎಸೈ ಅಬ್ದುಲ್ ಖಾದರ್ ಮತ್ತು ಕ್ರೈಂ ಎಸೈ ಪುರುಷೋತ್ತಮ್ ಅವರ ಆದೇಶದಂತೆ ಕ್ರೈಂ ಸಿಬಂದಿ ನಾರಾಯಣ ಮತ್ತು ಗಣೇಶ್ ಶೆಟ್ಟಿ ಅ. 13ರಂದು ಮಹಾರಾಷ್ಟ್ರ ನಲಸೋಪರ್ ಈಸ್ಟ್ ಬಳಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ವಿರುದ್ಧ ಬೇರೆ ಯಾವುದಾದರೂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದಾರೆ ಉಡುಪಿ ಜಿಲ್ಲಾ ಕಾರಾಗೃಹವನ್ನು ಸಂಪರ್ಕಿಸುವಂತೆ ಕಾಪು ಪೊಲೀಸರು ತಿಳಿಸಿದ್ದಾರೆ.