ಮಂಗಳೂರು: ನಗರದ ಕಾಲೇಜಿನಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದ ಉಪನ್ಯಾಸಕಿ ಯೋರ್ವರು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ನಗರದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್(23) ಎಂದು ತಿಳಿಯಲಾಗಿದೆ.
ಫುಡ್ ಅಲರ್ಜಿ ಕಾರಣ ಗ್ಲೋರಿಯಾ ಕಳೆದ ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಕಾಲೇಜಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು.
ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಗ್ಲೋರಿಯಾ ಅವರಿಗೆ ಫುಡ್ ಅಲರ್ಜಿ(ಅನಾಫಿಲ್ಯಾಕ್ಟಿಕ್ ರಿಯಾಕ್ಷನ್) ಸಮಸ್ಯೆ ಇತ್ತು. ಇದರಿಂದಾಗಿ ಈ ಹಿಂದೆಯೂ ಸ್ವಲ್ಪ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ಬಳಿಕ ಚೇತರಿಸಿಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಗ್ಲೋರಿಯಾ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.
ಗ್ಲೋರಿಯಾ ರೋಡ್ರಿಗಸ್ ಅವರ ದೇಹದ ಅಂಗಾಂಗವನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕಣ್ಣು, ಹೃದಯ, ಚರ್ಮ, ಯಕೃತ್, ಎರಡು ಕಿಡ್ನಿ, ಶ್ವಾಸಕೋಶವನ್ನು ದಾನ ಮಾಡಲಾಗಿದೆ. ಯಕೃತ್(ಲಿವರ್) ಮಂಗಳೂರಿನ ಎಜೆ ಆಸ್ಪತ್ರೆಗೆ ನೀಡಲಾಗಿದೆ. ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರಗೆ ನೀಡಲಾಗಿದೆ. ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಗಿದೆ. ಕಿಡ್ನಿಯನ್ನು ಕೆಎಂಸಿ ಆಸ್ಪತ್ರೆ ಮಣಿಪಾಲ ಹಾಗೂ ಚರ್ಮ ಹಾಗೂ ಕಣ್ಣುಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಡಲಾಗಿದೆ.