ಹುಬ್ಬಳ್ಳಿ: ಇತ್ತ ಕಡೆ ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಹೊರಗೆ ಕಾಲಿಡುತ್ತಿದ್ದಂತೆ ಮತ್ತೊಂದೆಡೆ ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದೆ ಬಂಡಾಯವೆದ್ದಿರುವ ಶಾಸಕ ನೆಹರು ಓಲೇಕಾರ ಇಂದು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಇಂದು ಶಿರಸಿಗೆ ತೆರಳಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ತೆರಳುತ್ತಿದ್ದು, ಅಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಲಿದ್ದಾರೆ. ಇಂದು ಸಂಜೆ ವೇಳೆ ಜೆಡಿಎಸ್ ಕಚೇರಿಗೆ ತೆರಳಿ ಪಕ್ಷ ಸೇರುತ್ತೇನೆ ಎಂದು ಹೇಳಿದ್ದಾರೆ. ಜಿಗಿಯಲು ರೆಡಿಯಾದ ಕರಡಿ ಸಂಗಣ್ಣ ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲು ಪಕ್ಷದ ವರಿಷ್ಠರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಸಂಸದ ಸಂಗಣ್ಣ ಕರಡಿ ಇಂದು ಬೆಂಬಲಿಗರ ಸಭೆ ಕರೆದಿದ್ದಾರೆ. ನಿನ್ನೆ ತಡರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಗಣ್ಣ ಅವರಿಗೆ ಫೋನ್ ಕರೆ ಮಾಡಿ ‘ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಭಾನುವಾರ ಎಲ್ಲವೂ ಪರಿಹಾರವಾಗಲಿದೆ’ ಎಂದು ಭರವಸೆ ನೀಡಿದ್ದಾರೆ. ‘ಮೊದಲು ಟಿಕೆಟ್ ನೀಡಲಾಗುವುದು ಎಂದು ರಾಜ್ಯ ನಾಯಕರು ನನಗೆ ಭರವಸೆ ಕೊಟ್ಟಿದ್ದರು. ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ನನಗೇ ಟಿಕೆಟ್ ನೀಡುವಂತೆ ಕೇಂದ್ರ ನಾಯಕರಿಗೆ ಶಿಫಾರಸು ಮಾಡಿದ್ದಾರೆ. ಪಕ್ಷದ ಆಂತರಿಕ ಸಮೀಕ್ಷೆಯ ವರದಿ ನನ್ನ ಪರವಾಗಿಯೇ ಬಂದಿದೆ. ಆದ್ದರಿಂದ ನನಗೇ ಟಿಕೆಟ್ ಕೊಡಬೇಕು ಎಂದು ಸಂಗಣ್ಣ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಟಿಕೆಟ್ ದೊರೆಯದೇ ಹೋದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.