ಉಡುಪಿ: ಜಿಲ್ಲೆಯ ಶಿರ್ವ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಶಿರ್ವ, ಕಾಪು, ಬೆಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವುಗೈದ ಆರೋಪಿಯೋರ್ವನನ್ನು ಬಂಧಿಸಿ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಓಂ ಕೋಲಾರ ಎಂದು ಗುರುತಿಸಲಾಗಿದೆ.
ಡಿ.5ರಂದು ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಪಾರ್ಕಿಂಗ್ ಮಾಡಿದ್ದ ವಾಹನ ಕಳವಾದ ಬಗ್ಗೆ ಮಹಿಳೆಯೋರ್ವರು ನೀಡಿದ ದೂರಿನಂತೆ ಶಿರ್ವ ಪೋಲಿಸರು ತನಿಖೆ ಪ್ರಾರಂಭಿಸಿದ್ದರು.
ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿ ಉಡುಪಿ, ಮಲ್ಪೆ ಕಾರ್ಕಳ, ಧರ್ಮಸ್ಥಳ ಕಡೆಗಳಲ್ಲಿ ಶೋಧ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಯಿಂದ ಶಿರ್ವ, ಕಾಪು, ಬೆಂಗಳೂರು ನಗರದಲ್ಲಿನ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಒಟ್ಟು ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯ್, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷ ಪ್ರಿಯಂವದಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜಮತ್ ಅಲಿ ಮೇಲುಸ್ತುವಾರಿಯಲ್ಲಿ ಶಿರ್ವ ಪೊಲೀಸ್ ಠಾಣಾಧಿಕಾರಿ ಮಂಜುನಾಥ ಮರಬದ ಮತ್ತು ಲೋಹಿತ್ ಕುಮಾರ್ ಸಿ ಎಸ್ ಹಾಗೂ ಸಿಬಂದಿ ನೇತೃತ್ವದ ತಂಡ ಈ ಕಾರ್ಯಚರಣೆ ನಡೆಸಿದೆ.




