ಬೆಳ್ತಂಗಡಿ ಸಮೀಪ ನಾಲ್ಕು ವರ್ಷದ ಹಿಂದೆ ಕಲ್ಮಂಜ ಗ್ರಾಮದ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಅವರ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ ಪ್ರಕರಣದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿ ಅವರಿಂದ ದರೋಡೆ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಯಲಾಗಿದೆ
ಬಂಧಿತ ಆರೋಪಿಗಳು ಮುಂಡಾಜೆ ಗ್ರಾಮ ನಿವಾಸಿಗಳಾದ ನವಾಝ್ (38) ರಿಯಾಝ್ ಹಾಗೂ ಬೆಂಗಳೂರಿನ ಕೃಷ್ಣ ಎಂದು ಗುರುತಿಸಲಾಗಿದೆ. ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಈ ಮಾಹಿತಿ ನೀಡಿದರು.
ಬಂಧಿತ ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ 104 ಗ್ರಾಂ ಚಿನ್ನಾಭರಣಗಳನ್ನು, 288 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹಾಗೂ 25,000 ರೂ. ನಗದು ಹಾಗು ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
2020 ಜೂನ್ 6ರಂದು ಕಲ್ಮಂಜ ಗ್ರಾಮದ ನಿವಾಸಿಯಾಗಿರುವ ಅಚ್ಯುತ ಭಟ್ ಎಂಬವರ ಮನೆಗೆ ನುಗ್ಗಿದ ದರೋಡೆ ಕೋರರು ಮನೆಯಲ್ಲಿದ್ದ ಅಚ್ಯುತ ಭಟ್ ಅವರನ್ನು ಹಾಗು ಅವರ ತಾಯಿ, ತಮ್ಮನ ಪತ್ನಿಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ಚಿನ್ನ ಹಗೂ ಬೆಳ್ಳಿಯ ಆಭರಣಗಳನ್ನು ಹಾಗೂ ನಗದನ್ನು ದರೋಡೆ ಮಾಡಿ ಪರಾರಿಯಾಗುದ್ದರು. ಆರೋಪಿಗಳು ಸುಮಾರು 30ರಿಂದ 35 ಪವನ್ ಚಿನ್ನಾಭರಣಗಳನ್ನು ಒಂದು ಕೆ.ಜಿ ಬೆಳ್ಳಿಯ ಆಭರಣಗಳನ್ನು ದರೋಡೆ ಮಾಡಿರುವುದಾಗಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಕಳ್ಳತನ ಮಾಡಿದ್ದ ಆರೋಪಿಗಳು ಚಿನ್ನಾಭರಣಗಳನ್ನು ಸ್ವಲ್ಪ ಸ್ವಲ್ಪ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ನಡುವೆ ಮೇ 22ರಂದು ಆರೋಪಿ ರಿಯಾಝ್ ಎಂಬಾತ ದಾಖಲೆಯಿಲ್ಲದ ಚಿನ್ನ ಮಾರಾಟ ಮಾಡಲು ಮುಂದಾಗುತ್ತಿದ್ದಾನೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಆತನಿಂದ ಲಭಿಸಿದ ಮಾಹಿತಿಗಳ ಮೇರೆಗೆ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಗಳಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.