ಉಡುಪಿ: ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಸಾರ್ವಜನಿಕರಲ್ಲಿ ಗೋಗರೆಯುತ್ತಿದ್ದ ತಂದೆಯಿಂದ ಮಾಹಿತಿ ಪಡೆದ ಪತ್ರಕರ್ತರು ಬಾಲಕಿಯನ್ನು ಉಡುಪಿ ಪೊಲೀಸರ ಸಹಕಾರದೊಂದಿಗೆ ಗಂಟೆಯೊಳಗೆ ಪತ್ತೆಹಚ್ಚಿ ಹೆತ್ತವರ ವಶಕ್ಕೆ ಒಪ್ಪಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಘಟನೆಯ ವಿವರ:
ಮೂಲ್ಕಿ ಬಸ್ ಸ್ಟ್ಯಾಂಡ್ ಸಮೀಪ ರಾತ್ರಿ 7:30ರ ಸುಮಾರಿಗೆ ಘಟನೆ ನಡೆದಿದೆ. ಜೋಯಿಡಾಕ್ಕೆ ಹೊರಟಿದ್ದ ಮಂಗಳೂರಿನ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮೂಲ್ಕಿಯಲ್ಲಿ ಕಾರ್ ನಿಲ್ಲಿಸಿ ಸಮೀಪದ ಹೋಟೆಲ್ ಒಂದರಲ್ಲಿ ಚಹಾ ಕುಡಿದು ರಸ್ತೆ ಬದಿ ನಿಂತಿದ್ದರು.ಈ ವೇಳೆ ಅಳುತ್ತಾ ದಾರಿಯಲ್ಲಿ ಹೋಗಿಬರುತ್ತಿದ್ದವರಲ್ಲಿ ಗೋಗರೆಯುತ್ತಿದ್ದ ವ್ಯಕ್ತಿಯೋರ್ವರು ಪತ್ರಕರ್ತರ ಮುಂದೆ ಮಗಳು ನಾಪತ್ತೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಬಿಜಾಪುರಕ್ಕೆ ಹೊರಟಿದ್ದ ಮಹಿಳೆ ಹುಡುಗಿಯೊಬ್ಬಳು ಬಾಗಲಕೋಟೆಗೆ ತೆರಳುವ ಕೆಎಸ್ ಆರ್ ಟಿಸಿ ಬಸ್ ಹತ್ತಿರುವ ಸುಳಿವು ನೀಡಿದ್ದರು. ಈ ಮಾಹಿತಿಯಾಧಾರಿಸಿ ಪತ್ರಕರ್ತರು ಕೂಡಲೇ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರಿಗೆ ವಿಡಿಯೋ, ಬಾಲಕಿಯ ಭಾವಚಿತ್ರ ಸಮೇತ ಮಾಹಿತಿ ನೀಡಿದ್ದಾರೆ. ಬಳಿಕ ಉಡುಪಿ ಕೆಎಸ್ ಆರ್ ಟಿಸಿ ನಿಲ್ದಾಣ ಅಧಿಕಾರಿಗೆ ಮಾಹಿತಿಯನ್ನು ರವಾನಿಸಿದ್ದಾರೆ. ತಕ್ಷಣ ಅಲರ್ಟ್ ಆದ ಪೊಲೀಸ್ ವರಿಷ್ಠಾಧಿಕಾರಿ ಅವರು ಕೆಎಸ್ ಆರ್ ಟಿಸಿ ಕಂಟ್ರೋಲರ್ ರಾಮ್ ಅವರಿಗೆ ಮಾಹಿತಿ ನೀಡಿ ಬಾಲಕಿಯನ್ನು ಹುಡುಕುವಂತೆ ಸೂಚನೆ ನೀಡಿದ್ದಾರೆ.ಅಷ್ಟರಲ್ಲಿ ಮಗುವಿನ ತಾಯಿ ಕೂಡಾ ಆಗಮಿಸಿದ್ದು ಬಾಲಕಿಯ ಮಾಹಿತಿಯನ್ನು ತಕ್ಷಣ ಉಡುಪಿ ಕಂಟ್ರೋಲ್ ರೂಮಿಗೆ ರವಾನಿಸಲಾಗಿತ್ತು. ಈ ಮಾಹಿತಿಯ ಆಧಾರದಲ್ಲಿ ಬಾಲಕಿ ಕೆಎಸ್ ಆರ್ ಟಿಸಿ ಬಸ್ ನಲ್ಲಿರುವುದು ಪತ್ತೆಯಾಗಿದೆ. ಕೆಎಸ್ ಆರ್ ಟಿಸಿ ಅಧಿಕಾರಿಗಳು ಮತ್ತು ಉಡುಪಿ ಪೊಲೀಸರು ಬಸ್ಸನ್ನು ಉಡುಪಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ತಡೆದು ನಿಲ್ಲಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಪತ್ರಕರ್ತರು ಪೋಷಕರ ಜೊತೆ ಉಡುಪಿಗೆ ತೆರಳಿ ಬಾಲಕಿಯನ್ನು ಕ್ಷೇಮವಾಗಿ ವಾಪಾಸ್ ಕರೆತಂದಿದ್ದಾರೆ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಕುತ್ತಾರ್, ಸದಸ್ಯರಾದ ಶಶಿ ಬೆಳ್ಳಾಯರು, ಗಿರೀಶ್ ಹಾಗೂ ಸಂದೇಶ್ ಶೆಟ್ಟಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಉಡುಪಿ ಪೊಲೀಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.