ಉಳ್ಳಾಲ: ನಗರದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಸಂತ್ರಸ್ತೆ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಇಂದು ಯುವತಿಯ ಮೇಲೆ ಅತ್ಯಾಚಾರ ಎಸಗಲಾಗಿದೆಯಾ ಎಂಬ ವೈದ್ಯಕೀಯ ವರದಿ ಪೊಲೀಸರ ಕೈ ಸೇರಲಿದೆ. ಘಟನೆ ನಡೆದ 24 ಗಂಟೆಯೊಳಗೆ ಮೂಲ್ಕಿಯ ಆಟೋ ಚಾಲಕ ಪ್ರಭುರಾಜ್ (38), ಕುಂಪಲದ ಎಲೆಕ್ಟ್ರಿಷಿಯನ್ ಮಿಥುನ್ (30) ಮತ್ತು ಮಂಗಳೂರು ನಿವಾಸಿ ಮಣಿ (30)ಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮೂಲದ ಮಹಿಳೆ ಕಳೆದ ಎರಡು ಮೂರು ವರ್ಷಗಳಿಂದ ಕೇರಳದ ಪ್ಲೈವುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಏಪ್ರಿಲ್ 16 ರಂದು ತನ್ನ ಸ್ನೇಹಿತನೊಂದಿಗೆ ಮತ್ತೊಂದು ಕಂಪನಿಯಲ್ಲಿ ಉದ್ಯೋಗಾವಕಾಶವನ್ನು ಅನ್ವೇಷಿಸಲು ಮಂಗಳೂರಿಗೆ ಬಂದರು. ಆದಾಗ್ಯೂ, ಈ ವೇಳೆ ಗೆಳೆಯನ ಜೊತೆಗೆ ಜಗಳವಾಗಿ ಆತ ಈಕೆಯ ಮೊಬೈಲಿಗೆ ಹಾನಿ ಮಾಡಿದ್ದ.
ನಂತರ ಅವಳು ತನ್ನ ಫೋನ್ ರಿಪೇರಿ ಮಾಡಲು ಆಟೋ ಹತ್ತಿದಳು. 5-6 ಗಂಟೆಗಳ ಕಾಲ ಆಕೆ ಆಟೋ ಡ್ರೈವರ್ ಜೊತೆಗೇ ಇದ್ದು, ಅವನ ಜೊತೆಗೆ ಗೆಳೆತನ ಆಗಿದೆ. ಮೊಬೈಲ್ ರಿಪೇರಿ ಹಣ ಕೂಡಾ ಆತನೇ ಪಾವತಿಸಿದ್ದ. ಆ ಬಳಿಕ ಆಕೆ ರಾತ್ರಿ ವೇಳೆ ಪ.ಬಂಗಾಳ ಹೋಗಲು ರೈಲ್ವೇ ನಿಲ್ದಾಣಕ್ಕೆ ಬಿಡಲು ಆಟೋ ಡ್ರೈವರಿಗೆ ಹೇಳುತ್ತಾಳೆ. ಆದರೆ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಹೋಗದೇ ಆಟೋ ಡ್ರೈವರ್ ಮತ್ತಿಬ್ಬರ ಗೆಳೆಯರನ್ನು ಕರೆಸಿ ಬೇರೊಂದು ಜಾಗಕ್ಕೆ ಹೋಗುತ್ತಾರೆ. ಆ ಜಾಗದಲ್ಲಿ ಆಕೆಗೆ ಚೆನ್ನಾಗಿ ಮದ್ಯಪಾನ ಮಾಡಿಸಿ, ಆಕೆ ಪ್ರಜ್ಞೆ ತಪ್ಪಿದ್ದು , ಪ್ರಜ್ಞೆ ಬಂದಾಗ ಅತ್ಯಾಚಾರ ನಡೆದಿರುವುದು ಆಕೆ ಗಮನಕ್ಕೆ ಬಂದಿದೆ. ಸದ್ಯ ಈ ಪ್ರಕರಣದ ತನಿಖೆ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.