ಉಪ್ಪಿನಂಗಡಿ: ಮನೆಗೆ ಬಂದ ಅಪರಿಚಿತರಿಬ್ಬರು ಕುಡಿಯಲು ನೀರು ಕೇಳಿ ಬಳಿಕ ಮನೆಯಲ್ಲಿದ್ದ ಮಹಿಳೆಗೆ ಚೂರಿಯನ್ನು ತೋರಿಸಿ ಬೆದರಿಸಿ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಮೇ.11ರಂದು ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಸುಹೈಬಾ ಎಂಬವರು ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಹೈಬಾ ಎಂಬವರ ಮನೆಯ ಅಂಗಳಕ್ಕೆ ಅಪರಿಚಿತ ಓರ್ವ ಗಂಡಸು ಮತ್ತು ಓರ್ವ ಮಹಿಳೆ ಬಂದಿದ್ದು ಅಪರಿಚಿತರಿಬ್ಬರು ಸುಹೈಬಾರಲ್ಲಿ ಮಾತನಾಡಿ ಮನೆಯಲ್ಲಿರುವ ಸದಸ್ಯರುಗಳ ಬಗ್ಗೆ ವಿಚಾರಿಸಿ. ಕುಡಿಯಲು ನೀರು ಕೇಳಿದ್ದರು. ನೀರು ತರಲು ತೆರಳಿದಾಗ, ಅಪರಿಚಿತರು ಮನೆಯ ಒಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಗೋಡ್ರೇಜ್ ಬಾಗಿಲು ತೆರೆದು ಹುಡುಕಾಡುತ್ತಿರುವುದನ್ನು ಕಂಡ ಸುಹ್ಮಬಾ ಬೊಬ್ಬೆ ಹಾಕಿ ತನ್ನ ಗಂಡನಿಗೆ ದೂರವಾಣಿ ಕರೆ ಮಾಡಲು ಯತ್ನಿಸಿದ್ದು, ಅಪರಿಚಿತ ವ್ಯಕ್ತಿಗಳು ಸುಹೈಬಾ ಅವರ ಕೈಯಲ್ಲಿದ್ದ ಮೊಬೈಲ್ ಫೋನನ್ನು ಎಳೆದು ಬಿಸಾಡಿ. ಹಲ್ಲೆ ನಡೆಸಿ. ಚೂರಿಯನ್ನು ತೋರಿಸಿ ಬೆದರಿಸಿ, ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡಿದ್ದಾರೆ. ಈ ವೇಳೆ ಬೊಬ್ಬೆ ಕೇಳಿ ನೆರೆಮನೆಯ ಮಹಿಳೆ ಬರುತ್ತಿರುವುದನ್ನು ಕಂಡ ಅಪರಿಚಿತರು ಮೋಟಾರ್ ಸೈಕಲಿನಲ್ಲಿ ಪರಾರಿಯಾಗಿದ್ದು, ಅಪರಿಚಿತರು ದೋಚಿದ ಆಭರಣಗಳ ಮೌಲ್ಯ ಅಂದಾಜು ಮೌಲ್ಯ ರೂ 1,00,000/- ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 58/2024 ಕಲಂ:450,394 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.