ಮಂಗಳೂರು : ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ‘ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆ’ ಎಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ಒಂದು ಲಕ್ಷ ರೂ.ಗಳನ್ನು ಪಡೆದು ವಂಚಿಸಿದ ಆರೋಪಿಯನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಗುರುವಾಯನಕೆರೆಯ ನಿವಾಸಿ ಜಿ.ಅಬ್ದುಲ್ ಕರೀಮ್ ಅಲಿಯಾಸ್ ಕೂಳೂರು ಉಸ್ತಾದ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
2022ರಲ್ಲಿ ಸಂತ್ರಸ್ತೆಗೆ ಖಿನ್ನತೆಯ ಸಮಸ್ಯೆ ಉಂಟಾಗಿದ್ದು, ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಆಗ ಆತ ‘ನಿಮಗೆ ಯಾರೋ ಮಾಠ ಮಾಡಿದ್ದಾರೆ. ಅದನ್ನು ಮೊದಲು ತೆಗಿಸಬೇಕು’ ಎಂದು ಹೇಳಿ ನಂಬಿಸಿದ್ದಾನೆ. ಮಾಟ ಮಂತ್ರ ನಿವಾರಿಸುವ ಚಿಕಿತ್ಸೆ ಕೊಡುತ್ತೇನೆ ಎಂದು ಹೇಳಿ ಮಹಿಳೆಯನ್ನು ಆಗಾಗ ಬರಲು ಹೇಳುತ್ತಿದ್ದ ಅಬ್ದುಲ್. ಸಂತ್ರಸ್ತೆ ಮಹಿಳೆ ತನ್ನ ಅಕ್ಕನ ಜೊತೆ ಈ ವ್ಯಕ್ತಿ ಬಳಿ ಹಲವು ಬಾರಿ ಹೋಗಿದ್ದಾರೆ. ಅಲ್ಲಿ ಈತ ಕೆಲವು ಬಾರಿ ಮಹಿಳೆಗೆ ಕುರಾನ್ ಓದಿಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಕೆ ಹೇಳಿದ್ದಾರೆ. 2022, ಫೆ.10 ರಂದು ಸಂತ್ರಸ್ತೆಯ ಅಕ್ಕನಿಗೆ ಕೆಲಸ ಇದ್ದ ಕಾರಣ ಸಂತ್ರಸ್ತೆ ಒಬ್ಬಳೇ ಹೆಜಮಾಡಿ ಮನೆಗೆ ಹೋಗಿದ್ದಳು. ಈ ವೇಳೆ ಅಲ್ಲಿ ಉಸ್ತಾದ್ ಆಕೆಯಲ್ಲಿ ಕುರಾನ್ ಓದಿಸಿ, ಬಳಿಕ ಆಕೆಗೆ ಚಿಕಿತ್ಸೆಯ ನೆಪದಲ್ಲಿ ಮೈಮುಟ್ಟಿ ಕಿರುಕುಳ ನೀಡಿದ್ದಾನೆ ಮತ್ತು ಮಹಿಳೆಯಿಂದ 55,000 ರೂ. ಪಡೆದಿದ್ದಾನೆ. “ನಾನು ಹೆಜಮಾಡಿಗೆ ಹೋದಾಗಲೆಲ್ಲಾ, ನನ್ನಲ್ಲಿ ಚಿಕಿತ್ಸೆಗೆ ಜಾಸ್ತಿ ಹಣ ಖರ್ಚಾಗುತ್ತದೆ ಎಂದು ಉಸ್ತಾದ್ ಹೇಳಿ ವಂಚಿಸಿ ಸುಮಾರು ಒಂದು ಲಕ್ಷ ರೂ. ಪಡೆದು ವಂಚಿಸಿದ್ದಾನೆ” ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಈ ವ್ಯಕ್ತಿ ಇದೇ ರೀತಿ ಮಾಟ ಮಂತ್ರ ನಿವಾರಿಸುವ ಉಸ್ತಾದ್ ಎಂಬ ಸೋಗಿನಲ್ಲಿ ಇನ್ನೂ ಹಲವರಿಗೆ ವಂಚಿಸಿರುವ ಹಾಗೂ ಕಿರುಕುಳ ನೀಡಿರುವ ಬಗ್ಗೆ ದೂರುಗಳಿವೆ ಎಂನ್ನಲಾಗಿದೆ. ಕುಟುಂಬಕ್ಕೆ ಮಾಟ ಮಂತ್ರದಿಂದ ಮುಕ್ತಿ ಸಿಗಲು ತಾನು ಹೇಳಿದಂತೆ ಮಾಡಬೇಕು ಎಂದು ಅವರನ್ನು ಮೌಢ್ಯದಲ್ಲಿ ಮುಳುಗಿಸಿ ಅವರನ್ನು ವಂಚಿಸುತ್ತಿದ್ದ ಈ ವ್ಯಕ್ತಿ ಅವರಿಗೆ ದೈಹಿಕವಾಗಿಯೂ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಬಾಲಕೃಷ್ಣ ನಾಯಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.