ಚೆನೈ : ಚಿತ್ರರಂಗದ ಖ್ಯಾತ ಗಾಯಕಿ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತೆ ವಾಣಿ ಜೈರಾಮ್ ಅವರು ಶನಿವಾರ ಚೆನ್ನೈನ ತಮ್ಮ ನಿವಾಸದಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಯಕಿಯ ಸಾವನ್ನು ಥೌಸಂಡ್ ಲೈಟ್ಸ್ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದು, ಐಪಿಸಿ ಸೆಕ್ಷನ್ 174ರಡಿ ಪ್ರಕರಣವನ್ನ ಆಯೂರ್ ಲಾನ್ಪರ ಪೊಲೀಸ್ ಠಾಣೆಯ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇನ್ನು ಈ ಖ್ಯಾತ ಗಾಯಕಿಯ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ ಎನ್ನಲಾಗಿದ್ದು, ಅವರಿಗೆ ನಿಖರವಾಗಿ ಏನಾಯಿತು ಎಂಬುದರ ಕುರಿತು ತನಿಖೆ ನಡೆಯಲಿದೆ.
ಚೆನ್ನೈನಲ್ಲಿರುವ ನುಂಗಬಾಕಂ ಮನೆಯಲ್ಲಿ ವಾಣಿ ಅವರು ವಾಸವಾಗಿದ್ದರು. ಅವರ ಹಣೆಗೆ ಪೆಟ್ಟು ಬಿದ್ದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಇಂದು ಎಂದಿನಂತೆ ಮನೆ ಕೆಲಸದವಳು ವಾಣಿ ಮನೆಗೆ ತೆರಳಿದ್ದರು. ಡೋರ್ ಲಾಕ್ ಆದ ಕಾರಣ ಕಾಲಿಂಗ್ ಬೆಲ್ ಒತ್ತಿದ್ದಾರೆ. ಆದರೆ, ಒಳಗಡೆ ಇಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಕಾರಣಕ್ಕೆ ಮನೆ ಕೆಲಸದವಳು ಪತಿಯ ಮೊಬೈಲ್ನಿಂದ ವಾಣಿ ಅವರಿಗೆ ಕರೆ ಮಾಡಿದ್ದಾರೆ. ಆದರೂ ಅವರ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ.
ಇದರಿಂದ ಅನುಮಾನಗೊಂಡ ಮನೆಕೆಲಸದವಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಒಡೆದಿದ್ದಾರೆ. ಅಲ್ಲಿ ವಾಣಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವಾಣಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ವಾಣಿ ಹಣೆಯ ಮೇಲೆ ದೊಡ್ಡ ಗಾಯ ಆಗಿದೆ. ಮುಖದ ಮೇಲೂ ಗಾಯಗಳು ಇವೆ. ಹೀಗಾಗಿ, ಯಾರಾದರೂ ಅವರನ್ನು ಹೊಡೆದು ಸಾಯಿಸಿದರೇ ಎನ್ನುವ ಅನುಮಾನ ಮೂಡಿದೆ. ಸದ್ಯ ಮನೆ ಕೆಲಸದವಳ ಹೇಳಿಕೆ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಾಣಿ ಬಿದ್ದಿದ್ದರಿಂದಲೂ ಮುಖಕ್ಕೆ ಗಾಯ ಆಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಕೆಲಸದವಳು ಹೇಳುವ ಪ್ರಕಾರ ವಾಣಿ ಆರೋಗ್ಯವಾಗಿಯೇ ಇದ್ದರು. ವಾಣಿ ಅವರು ಜನವರಿ 26ರಂದು ಪದ್ಮ ಭೂಷಣ ಅವಾರ್ಡ್ ಸ್ವೀಕರಿಸಿದ್ದರು. ಇದಕ್ಕಾಗಿ ಅನೇಕರು ಅವರಿಗೆ ವಿಶ್ ಮಾಡುತ್ತಿದ್ದರು ಎಂದು ಕೆಲಸದಾಕೆ ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ.
ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.