ಮಂಗಳೂರು: ಅಪ್ರಾಪ್ತೆಯನ್ನು ಅತ್ಯಾಚಾರಗೈದು ವೀಡಿಯೋ ಮಾಡಿ ವೈರಲ್ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯವು ಅಪರಾಧಿಗೆ 20ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿ ನಿವಾಸಿ ಅಶ್ವಥ್(22) ಶಿಕ್ಷೆಗೊಳಗಾದ ಅಪರಾಧಿ. ಪ್ರಕರಣದ 17ರ ಅಪ್ರಾಪ್ತೆಯನ್ನು ಆರೋಪಿ ಅಶ್ವತ್ಥ್ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದಾನೆ. ಬಳಿಕ ಬಾಲಕಿಯನ್ನು ಭೇಟಿಯಾಗುವ ಎಂದು ಪುಸಲಾಯಿಸಿ 2023ರ ಮಾರ್ಚ್ 15ರಂದು ಬೆಳಗ್ಗೆ 10ಗಂಟೆಗೆ ಮುಲ್ಕಿ ಬಸ್ಸು ನಿಲ್ದಾಣದಿಂದ ಬೈಕ್‌ನಲ್ಲಿ ಒತ್ತಾಯಪೂರ್ವಕವಾಗಿ ಕರೆದೊಯ್ದಿದ್ದಾನೆ.
ಅಲ್ಲಿಂದ ಆಕೆಯನ್ನು ಮಣಿಪಾಲದ ಸಾಯಿ ಸಾಗರ್ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಆಕೆಯದ್ದೇ ಮೊಬೈಲ್‌ನಲ್ಲಿ ಅತ್ಯಾಚಾರದ ವೀಡಿಯೋ ಮಾಡಿದ್ದಾನೆ. ಬಳಿಕ ವೀಡಿಯೋವನ್ನು ಅಶ್ವತ್ಥ್ ತನ್ನ ಮೊಬೈಲ್‌ಗೆ ಫಾರ್ವರ್ಡ್ ಮಾಡಿದ್ದಾನೆ. ಬಳಿಕ ಅಶ್ವತ್ಥ್ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇತರರಿಗೆ ರವಾನಿಸಿದ್ದಾನೆ. ಈ ವೀಡಿಯೋ ಸಂತ್ರಸ್ತ ಬಾಲಕಿಯ ತಂದೆಗೂ ಸಹ ಬಂದಿದೆ.
ತಕ್ಷಣ ಬಾಲಕಿಯ ತಂದೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಕ್ಸೊ ಪ್ರಕರಣ ದಾಖಲಿಸಿಕೊಂಡು ಮುಲ್ಕಿ ಪೊಲೀಸ್ ನಿರೀಕ್ಷಕ ವಿದ್ಯಾಧರ್ ಡಿ ಬಾಯ್ಕೆರಿಕರ್ ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದಾರೆ. ಈ ಪ್ರಕರಣವು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 24 ಸಾಕ್ಷಿದಾರರನ್ನು ವಿಚಾರಿಸಿ, 49 ದಾಖಲೆಗಳನ್ನು ಗುರುತಿಸಲಾಗಿರುತ್ತದೆ. ಸಾಕ್ಷ್ಯ, ದಾಖಲೆಗಳು, ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ಅಶ್ವತ್ಥ್ ವಿರುದ್ಧ ಅಪರಾಧ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ. ಎಸ್.ರವರು ಐಸಿಸಿ ಸೆಕ್ಷನ್ 376 9 ಮತ್ತು ಕಲಂ: 6 ಪೊಕ್ಸೊ ಕಾಯ್ದೆಯಂತೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 1,00,000 ರೂ. ಹಣವನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿದೆ.
ಅಲ್ಲದೆ ಸಂತ್ರಸ್ಥರ ಪರಿಹಾರ ಯೋಜನೆಯಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 4,00,000 ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧೀಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶಿದ್ದಾರೆ. ಸರ್ಕಾರದ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬದರಿನಾಥ ನಾಯರಿರವರು ವಾದ ಮಂಡಿಸಿದ್ದಾರೆ.