ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಎ. 26ರಂದು ಮತದಾನ ನಡೆಯಲಿದ್ದು ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಮುಖಂಡರು, ಕಾರ್ಯಕರ್ತರು, ಸ್ಟಾರ್ ಕ್ಯಾಂಪೇನರ್‌ಗಳು, ಮೆರವಣಿಗೆ ಅಯೋಜಕರು ಎ. 24ರ ಸಂಜೆ 6 ಗಂಟೆಗೆ ಕ್ಷೇತ್ರ ಬಿಡಬೇಕೆಂದು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಚುನಾವಣೆ ಸಿದ್ಧತೆ ಹಾಗೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ತಮ್ಮ ಕಚೇರಿಯಲ್ಲಿ ಸಭೆಯಲ್ಲಿ ಮಾತನಾಡಿ, ಮತದಾನ ದಿನದ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರ, ಧ್ವನಿವರ್ಧಕಗಳ ಬಳಕೆಗೆ ಅವಕಾಶ ಇರುವುದಿಲ್ಲ.
ಹಾಗೆಯೇ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ ಸಂಬಂಧಪಟ್ಟ ಅಭ್ಯರ್ಥಿಗಳು ಅಥವಾ ಪಕ್ಷವು ಮಾಧ್ಯಮ ಪ್ರಾಮಾಣೀಕರಣ ಸಮಿತಿಯಿಂದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಯಾವುದೇ ಚುನಾವಣೋತ್ತರ ಸಮೀಕ್ಷೆ ಹಾಗೂ ಸಮೀಕ್ಷಾ ಫಲಿತಾಂಶ ಪ್ರಚಾರಪಡಿಸುವಂತಿಲ್ಲ. ಎ. 24ರ ಸಂಜೆ 5ರಿಂದ ಎ. 26ರ ಮಧ್ಯರಾತ್ರಿ 12ರ ವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಲಾಗಿದೆ ಎಂದರು. ವಾರ್ತಾಧಿಕಾರಿ ಮಂಜುನಾಥ್ ಬಿ., ತಹಶೀಲ್ದಾರ್ ಗುರುರಾಜ್, ಅಭ್ಯರ್ಥಿಗಳು, ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.