ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರವು ಈ ಸಾಲಿನ 6ನೇ ಹಾಗೂ 2023-24ನೇ ಆರ್ಥಿಕ ವರ್ಷದ ಕೊನೆಯ ಕ್ರೂಝ್ ಪ್ರವಾಸಿ ವಿಲಾಸಿ ಹಡಗು ‘ಸೆವೆನ್ ಸೀಸ್ ಮರೈನರ್’ನ್ನು ರವಿವಾರ(ಮಾ.31) ಸ್ವಾಗತಿಸಿದೆ.
ಸೆವೆನ್ ಸೀಸ್ ಮರೈನರ್ ಒಟ್ಟು 610 ಪ್ರಯಾಣಿಕರು ಮತ್ತು 440 ಸಿಬ್ಬಂದಿಯನ್ನು ಹೊತ್ತು ಮಂಗಳೂರಿಗೆ ಆಗಮಿಸಿದ್ದು, ಪ್ರವಾಸಿಗರಿಗೆ ನವ ಮಂಗಳೂರು ಬಂದರಿನ ಹಡಗು ತಂಗುದಾಣದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ವೆಂಕಟರಮಣ ಅಕ್ಕರಾಜು, ಉಪಾಧ್ಯಕ್ಷ ಕೆ ಜಿ ನಾಥ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದು ವಿದೇಶಿಗರನ್ನು ಸ್ವಾಗತಿಸಿದರು.
ಪ್ರವಾಸಿಗರ ಆಕರ್ಷಣೆಯಾದ ಸೆಲ್ಫಿ ಸ್ಟ್ಯಾಂಡ್
ಪ್ರವಾಸಿಗರು ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣಗಳು, ದೇವಾಲಯ, ಮಾರುಕಟ್ಟೆ ಮತ್ತು ಅಂಗಡಿಗಳಿಗೆ ತೆರಳಲು ಅನುಕೂಲವಾಗುವಂತೆ ಬಸ್ ಮತ್ತು ಟ್ಯಾಕ್ಸಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆಯುಷ್ ಸಚಿವಾಲಯವು ಸ್ಥಾಪಿಸಿದ ಕೇಂದ್ರದಲ್ಲಿ ಪ್ರಯಾಣಿಕರು ಧ್ಯಾನದ ಅನುಭವ ಪಡೆದುಕೊಂಡರು. ತುಳುನಾಡಿನ ಯಕ್ಷಗಾನ ಕಲಾ ಪ್ರಕಾರವನ್ನು ಪ್ರದರ್ಶಿಸುವ ವಿಶಿಷ್ಟ ಸೆಲ್ಫಿ ಸ್ಟ್ಯಾಂಡ್ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಪ್ರವಾಸಿಗರನ್ನು ರಂಜಿಸಿದವು. ಕಾರ್ಕಳ ಗೋಮಟೇಶ್ವರ ದೇವಸ್ಥಾನ, ಮೂಡುಬಿದಿರೆಯ 1000 ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ನಗರದ ಸಾಂಪ್ರದಾಯಿಕ ಮನೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು. ನಿನ್ನೆ ಸಂಜೆ 6 ಗಂಟೆಗೆ ಈ ಪ್ರವಾಸಿ ನೌಕೆ ಇಲ್ಲಿಂದ ಮರ್ಮುಗೋವಾಕ್ಕೆ ತೆರಳಿತು.