ಮಂಗಳೂರು: ಡ್ರಗ್ಸ್ ಮುಕ್ತಕ್ಕೆ ಪಣ ತೊಟ್ಟು, ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿರುವ ಹಾಗೂ ಇನ್ನಿತರ ಅಕ್ರಮಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಮಂಳೂರಿನ ಪೊಲೀಸ್ ಕಮಿಷನರ್ ವರ್ಗಾವಣೆಗೊಂಡಿರುವುದು ಮಂಗಳೂರು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಫೆ.24ರಂದು ಕುಲದೀಪ್ ಆರ್. ಜೈನ್ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ ನಗರದಲ್ಲಿ ನಡೆಯುತ್ತಿದ್ದ ಡ್ರಗ್ಸ್ ದಂಧೆ, ಮಟ್ಕಾ ದಂಧೆ, ಅಕ್ರಮ ಮರಳು ಸಾಗಾಟ ಸೇರಿದಂತೆ ಇನ್ನಿತರ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿದ್ದರು. ಈ ವೇಳೆ ಯಾವ ಲಾಬಿಗೂ ಮಣಿಯದೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರನ್ನು, ಅಪರಾಧ ಕೃತ್ಯಗಳಲ್ಲಿ ತೊಡಗಿ ತಲೆಮರೆಸಿಕೊಂಡಿರುವವರ ಹೆಡೆಮುರಿಕಟ್ಟಿ ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದರು. ಆದರೆ ಮಂಗಳೂರಿನಲ್ಲಿ ಇಷ್ಟೆಲ್ಲಾ ಉತ್ತಮ ಕೆಲಸ ಮಾಡಿ ಜನಮನ್ನಣೆ ಪಡೆದ ಅಧಿಕಾರಿಯನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಮಗೆ ಮತ್ತೆ ಅದೇ ಕಮಿಷನರ್ ಬೇಕು ಎಂಬ ಕೂಗು ಕೇಳಿ ಬರುತ್ತಿದೆ. ದಕ್ಷ ಕಾರ್ಯವೈಖರಿ ಇರುವ ಪೊಲೀಸ್ ಅಧಿಕಾರಿಯನ್ನೇ ಎತ್ತಂಗಡಿ ಮಾಡುವಷ್ಟು ಸರಕಾರಕ್ಕೆ ಯಾರ ಒತ್ತಡ ಇದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ದಕ್ಷ ಅಧಿಕಾರಿಗಳನ್ನು ಹೆಚ್ಚು ಸಮಯ ಕೆಲಸ ಮಾಡಲು ಬಿಡದೆ ಎತ್ತಂಗಡಿ ಶಿಕ್ಷೆ ಕೊಡಿಸಲಾಗುತ್ತದೆ ಎಂಬುದನ್ನು ಸಿದ್ದರಾಮಯ್ಯ ಸರಕಾರವೂ ದೃಢಗೊಳಿಸಿದೆ.