ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನು ಕನಿಷ್ಠ ಎರಡು ವರ್ಷಗಳ ಕಾಲ ಒಂದು ಸ್ಥಳದಿಂದ ವರ್ಗಾವಣೆ ಮಾಡದಂತೆ ನಿರ್ಬಂಧವಿಧಿಸುವ ಕರ್ನಾಟಕಪೊಲೀಸು ತಿದ್ದುಪಡಿ ವಿಧೇಯಕಕ್ಕೆ ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ಪೊಲೀಸ್ ಅಧಿಕಾರಿ ಮೇಲೆ ಗುರುತರ ಆರೋಪ, ದೋಷಾರೋಪ ಪಟ್ಟಿ ಸಲ್ಲಿಕೆ, ಪದೋನ್ನತಿಯಂತಹ ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಸುಖಾಸುಮ್ಮನೆ ವರ್ಗಾವಣೆ ಮಾಡುವಂತಿಲ್ಲ. ಕನಿಷ್ಠ ಎರಡು ವರ್ಷ ಒಂದೆಡೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವ ಮೂಲಕ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ನಿರ್ಮಾಣ, ಅಪರಾಧ ಪತ್ತೆ ಹಾಗೂ ಅಪರಾಧ ತಡೆಗೆ ಸಹಕರಿಸಲು ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್, ಈವರೆಗೆ ಒಂದು ವರ್ಷದವರೆಗೆ ಪೊಲೀಸ್ ವರ್ಗಾವಣೆ ಮಾಡುವಂತಿಲ್ಲ ಬಳಿಕ ಮಾಡಬಹುದು ಎಂದು ಕಾನೂನಿನಲ್ಲಿ ಇದೆ. ಇದರಿಂದ ಒಬ್ಬ ಪೊಲೀಸ್ ಅಧಿಕಾರಿ ಹೋಗಿ ವರದಿ ಮಾಡಿಕೊಂಡು ಠಾಣೆ, ಜನ, ಕೇಸುಗಳನ್ನು ತಿಳಿದುಕೊಳ್ಳುವಾಗಲೇ ಸಮಯ ಕಳೆದು ಹೋಗಿರುತ್ತದೆ. ಆ ವೇಳೆಗಾಗಲೇ ಬೇರೆಯವರು ಬರುತ್ತಾರೆ. ಇದನ್ನು ತಪ್ಪಿಸಲು ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.