ಐಸಿಸ್ ಜೊತೆ ಸಂಪರ್ಕ ಹೊಂದಿರುವ ಶಂಕಿತ ಉಗ್ರನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯುವತಿಯನ್ನು ರಾಷ್ಟ್ರೀಯ ತನಿಖಾ ದಳ (NIA) ತೀವ್ರ ವಿಚಾರಣೆ ನಡೆಸಿದೆ.
ಕಳೆದ ಎರಡು ದಿನಗಳ ಹಿಂದೆ ಮಹರಾಷ್ಟ್ರದ ಎನ್ ಐಎ ಅಧಿಕಾರಿಗಳು ಭಟ್ಕಳದ ಆಜಾದ್ ನಗರಕ್ಕೆ ಆಗಮಿಸಿ, ಯುವತಿಯನ್ನು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಐಸಿಸ್ ಸಂಘಟನೆಗೆ ಹಣ ವರ್ಗಾವಣೆ ಮಾಡುತ್ತಿದ್ದ ಇಂಜಿನಿಯರ್ ಹುಸೇನ್ ಅಬ್ದುಲ್ ಅಜೀಜ್ ಶೇಖ್ (32) ಎಂಬಾತನನ್ನು ಮಹಾರಾಷ್ಟ್ರದ ನಾಸಿಕ್ ನ ಟಿಡ್ಕೆ ಕಾಲೋನಿಯಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಹುಸೇನ್ ಅಬ್ದುಲ್ ಶೇಖ್ ಮನೆಯಲ್ಲಿ ಆತನಿಗೆ ಸಂಬಂಧಿಸಿದ ಸಿಮ್ ಕಾರ್ಡ್, ಮೊಬೈಲ್, ಪೆನ್ ಡ್ರೈವ್, ಲ್ಯಾಪ್ ಟಾಪ್ ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಆತನ ಜೊತೆ ಭಟ್ಕಳ ಮೂಲದ ಯುವತಿ ಸಂಪರ್ಕವಿರುವುದು ಬಹಿರಂಗವಾಗಿದೆ. ಅಲ್ಲದೇ ಹುಸೇನ್ ಅಬ್ದುಲ್ ಶೇಖ್ ನನ್ನು ಆಕೆ ಪ್ರೀತಿಸುತ್ತಿದ್ದಳು ಎಂಬ ವಿಚಾರ ಗೊತ್ತಾಗಿದೆ.
ಯುವತಿ ಭಟ್ಕಳದಲ್ಲಿ ಆನ್ ಲೈನ್ ಅರೇಬಿಕ್ ಕ್ಲಾಸ್ ನಡೆಸುತ್ತಿದ್ದು, ಜ.17ರಂದು ಆಕೆ ಹುಸೇನ್ ಅಬ್ದುಲ್ ನನ್ನು ಭಟ್ಕಳದ ಲಾಡ್ಜ್ ಒಂದರಲ್ಲಿ ಭೇಟಿಯಾಗಿದ್ದಾಳೆ. ಅಲ್ಲದೇ ಆರೋಪಿಗೆ ಈವರೆಗೆ ವಿವಿಧ ಹಂತಗಳಲ್ಲಿ 4-5 ಲಕ್ಷ ಹಣ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಯುವತಿಯನ್ನು ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿ ವಾಪಾಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.