ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ದ ಪೋಸ್ಟ್ ಮಾಡುವುದು ಹೆಚ್ಚಾಗಿದ್ದು, ಅಂತವರ ವಿರುದ್ದ ಪ್ರಕರಣ ದಾಖಲು ಮಾಡಲಾಗುತ್ತಿದೆ.ಅದೇ ರೀತಿ ಕಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್. ಆನಂದ್ ಅವರ ವಿರುದ್ಧ ವಾಟ್ಸ್ಪ್ ಸ್ಟೇಟಸ್ ಹಾಕಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರನ್ನು ಸೇವೆಯಿಂದ ಅಮಾನತು ಮಾಡಿರುವುದು ಬೆಳಕಿಗೆ ಬಂದಿದೆ.
ತನಗೆ ಏನಾದರೂ ಆದರೆ ಅದಕ್ಕೆ ಶಾಸಕ ಆನಂದ್ ಅವರೇ ಹೊಣೆ. ಕಡೂರು ಶಾಸಕರಿಗೆ ನನ್ನ ಧಿಕ್ಕಾರವಿರಲಿ ಎಂದು ಮಹಿಳಾ ಪೊಲೀಸ್ ಪೇದೆ ಲಂತಾ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಇದಕ್ಕೆ ಸಂಬAಧಿಸಿದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.
ಈ ಸಂದೇಶವನ್ನು ಗಮನಿಸಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಲತಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಚುನಾವಣಾ ಪ್ರಚಾರದ ವೇಳೆ ಹೆಲ್ಮೆಟ್ ಧರಿಸದ ಕಾಂಗ್ರೆಸ್ ಕಾರ್ಯಕರ್ತರಿಗೆ ಲತಾ ಅವರು ದಂಡ ವಿಧಿಸಿದ್ದರು. ಆನಂದ್ ಅವರು ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲಿಗರಿಗೆ ದಂಡ ವಿಧಿಸಿದ್ದನ್ನು ಪ್ರಶ್ನಿಸಿದ್ದರು. ಈ ಘಟನೆಯ ವಿಡಿಯೋ ಆಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈಗ ಲತಾ ಅವರನ್ನು ಕಡೂರು ಠಾಣೆಯಿಂದ ತರೀಕೆರೆ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಲತಾ, ಇದು ದ್ವೇಷದ ವರ್ಗಾವಣೆ ಎಂದು ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ವರ್ಗಾವಣೆ ವಿರೋಧಿಸಿ ಸಬ್ ಇನ್ಸ್ಪೆಕ್ಟರ್ ಜತೆಯೂ ಲತಾ ಮಾತಿನ ಚಕಮಕಿ ನಡೆಸಿದ್ದಾರೆಂದು ತಿಳಿದುಬಂದಿದೆ.