ಬೆಂಗಳೂರು: ರಾಜ್ಯಾದ್ಯಂತ ಕ್ಷ ಕಿರಣ ಸೇವೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಏಕೆಂದರೆ, ಆರೋಗ್ಯ ಇಲಾಖೆಯ ಕ್ಷ ಕಿರಣ ವಿಕಿರಣ ಸುರಕ್ಷತಾ ನಿರ್ದೇಶನಾಲಯದ ನಿರ್ದೇಶಕರ ಹುದ್ದೆಗೆ ಅರ್ಹತೆ ಹೊಂದಿಲ್ಲದ ಅಧಿಕಾರಿಯನ್ನು ನಿಯೋಜಿಸಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕೇಂದ್ರ ಸರ್ಕಾರದ ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯ(ಎಇಆರ್‌ಬಿ) ನಿಯಮಗಳನ್ನು ಗಾಳಿಗೆ ತೂರಿ ಅನರ್ಹತೆ ಹೊಂದಿರುವ ಡಾ.ಎನ್.ರವಿ ಎಂಬುವರನ್ನು ನೇಮಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ನಿರ್ದೇಶಕರ ಹುದ್ದೆ ಗ್ರೂಪ್ ‘ಎ’ ಹುದ್ದೆಯಾಗಿದೆ. ಅರ್ಹತೆ ಇರುವವರನ್ನು ನೇಮಿಸು ಬದಲು ಅನರ್ಹತೆ ಇರುವ ರೇಡಿಯೇಷನ್ ಸೆಫ್ಟಿ ಅಧಿಕಾರಿಯನ್ನು ಕಾನೂನುಬಾಹಿರವಾಗಿ ನೇಮಿಸಲಾಗಿದೆ. ಇದರ ಬಗ್ಗೆ ಸರ್ಕಾರ ಎಚ್ಚೆತ್ತುಗೊಳ್ಳದಿದ್ದರೆ, ಬರುವ ದಿನಗಳಲ್ಲಿ ಕ್ಷ ಕಿರಣ ಸೇವೆಯೇ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಹುದ್ದೆಗೆ ನೇಮಿಸಲು ಆರೋಗ್ಯ ಇಲಾಖೆ ಮತ್ತು ಮಂಡಳಿ ನಡುವೆ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಒಪ್ಪಂದ ಅನ್ವಯ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಭೌತಶಾಸದಲ್ಲಿ ಎಂಎಸ್ಸಿ ಪದವಿ ಪಡೆದಿರಬೇಕು. ರೇಡಿಯಾಲಜಿಕಲ್ ಭೌತಶಾಸ್ತ್ರದಲ್ಲಿ ಎಂಎಸ್ಸಿ ಡಿಪ್ಲೊಮಾ ಪಡೆದಿರಬೇಕು. ಜತೆಗೆ, ಪ್ರತಿಷ್ಠಿತ ಅಕಾಡೆಮಿಕ್ ಅಥವಾ ಸಂಶೋಧನೆಗಳ ಸಂಸ್ಥೆಗಳಲ್ಲಿ ವಿಕಿರಣ ಸುರಕ್ಷತೆ ಸಂಬಂಧ ಐದು ವರ್ಷ ಕಾಲ ಕಾರ್ಯನಿರ್ವಹಿಸಿದ ಅನುಭವ ಇರಬೇಕೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಬಗ್ಗೆ 2018ರ ಡಿ.27ರಂದು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ಹುದ್ದೆಗೆ ಅನುಭವ ಹೊಂದಿಲ್ಲದ ವ್ಯಕ್ತಿಯನ್ನು ನೇಮಿಸಲಾಗಿದೆ.
ರಾಜ್ಯದಲ್ಲಿ ಶೇ.80 ಬಡ ಮತ್ತು ಮಧ್ಯಮ ರೋಗಿಗಳು ನಾನಾ ರೋಗಕ್ಕೆ ಸಂಬಂಧಿಸಿಂತೆ ಎಕ್ಸ್ ರೇ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೇವೆ ಲಭ್ಯವಿದೆ. ಕೆಲ ಆಸ್ಪತ್ರೆಗಳಲ್ಲಿ ಕ್ಷ ಕಿರಣ ಯಂತ್ರಗಳು ಇಲ್ಲದಂತಾಗಿದೆ. ಸಿಬ್ಬಂದಿ ಕೊರತೆಯಿಂದ ರೋಗಿಗಳಿಗೆ ಸಮರ್ಪಕವಾಗಿ ಸೇವೆ ಸಿಗದಂತಾಗಿದೆ. ರಾಜ್ಯಾದ್ಯಂತ ಕ್ಷ ಕಿರಣ ಸೇವೆ ಬಗ್ಗೆ ನಿರ್ದೇಶನಾಲಯ ಮೇಲ್ವಿಚಾರಣೆ ನಡೆಸುತ್ತಿದೆ. ಕ್ಷ ಕಿರಣ ಹೊರಸೂಸುವ ಯಂತ್ರಗಳಿಂದ ಅಪಾಯ ತಡೆಯುವುದು ಸಂಸ್ಥೆ ಜವಾಬ್ದಾರಿಯಾಗಿದೆ. ಏನಾದರೂ ಕ್ಷ ಕಿರಣದಲ್ಲಿ ಎಡವಟ್ಟಾದರೆ ರೋಗಿಗಳು ಕ್ಯಾನ್ಸರ್‌ನಂಥ ಗಂಭೀರ ಕಾಯಿಲೆ ಸೇರಿ ಅಡ್ಡ ಪರಿಣಾಮಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ, ಈ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಲು ಅರ್ಹತೆ ಇರುವ ಅಧಿಕಾರಿ ನೇಮಿಸಬೇಕು. ಆದರೆ, ಸೂಕ್ತ ವ್ಯಕ್ತಿಯನ್ನು ನೇಮಿಸದಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಕ್ಷ ಕಿರಣ ಸೇವೆ ಸ್ಥಗಿತಗೊಂಡರೆ ಗತಿಯೇನು? ಎಂಬ ಬಗ್ಗೆ ಯಕ್ಷಪಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.