ಮಂಗಳೂರು : ಕರಾವಳಿಯಲ್ಲಿ ಹಿಂಗಾರು ಮಳೆ ಮುಂದುವರಿದಿದ್ದು, ನವೆಂಬರ್ 7ರವರೆಗೆ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಳೆದ ಒಂದು ವಾರದಿಂದ ಕರಾವಳಿಯಲ್ಲಿ ಸಂಜೆ ಬಳಿಕ ಗುಡುಗು, ಸಿಡಿಲು, ಮಿಂಚು ಸಹಿತ ಸಾಧಾರಣ ಮಳೆ ಸುರಿಯುತ್ತಿದೆ.ಶುಕ್ರವಾರ ರಾತ್ರಿ ಕೂಡ ದ.ಕ.ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗುಡುಗು, ಮಿಂಚಿನ ಮಳೆಯಾಗಿದೆ. ಅಪರಾಹ್ನ ಮಂಗಳೂರು ಮಾತ್ರವಲ್ಲ ಗ್ರಾಮಾಂತರಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ನವೆಂಬರ್ 5ರಿಂದ ನವೆಂಬರ್ 7ರ ವರೆಗೆ ದ.ಕ.ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆ ನಿರೀಕ್ಷಿಸಲಾಗಿದೆ.
ಕಡಬ ಗರಿಷ್ಠ ಮಳೆ: ಶನಿವಾರ ಬೆಳಗ್ಗಿನ ವರೆಗೆ ದ.ಕ.ಜಿಲ್ಲೆಯ ಕಡಬದಲ್ಲಿ ಗರಿಷ್ಠ 52.2 ಮಿಲಿ ಮೀಟರ್ ಮಳೆಯಾಗಿದ್ದು, ದಿನದ ಸರಾಸರಿ ಮಳೆ 28.8 ಮಿ.ಮೀ. ಆಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 27.2 ಮಿ.ಮೀ, ಬಂಟ್ವಾಳ 17.5 ಮಿ.ಮೀ, ಮಂಗಳೂರು ತಾಲೂಕಿನಲ್ಲಿ 8.3 ಮಿ.ಮೀ, ಪುತ್ತೂರು 36.4 ಮಿ.ಮೀ, ಸುಳ್ಯ 36.9 ಮೂಡುಬಿದಿರೆ 15.4 ಮಿ.ಮೀ, ಮೂಲ್ಕಿ 7.4 ಮಿ.ಮೀ, ಉಳ್ಳಾಲ 9.2 ಮಿ.ಮೀ. ಮಳೆ ದಾಖಲಾಗಿದೆ.