ರಾಜ್ಯದ ಪದವೀಧರರು, ಡಿಪ್ಲೋಮಾದಾರರು ಎದುರು ನೋಡುತ್ತಿರುವಂತ ಯುವನಿಧಿ ಯೋಜನೆಗೆ ಡಿ.26ರಿಂದ ನೋಂದಣಿ ಆರಂಭಗೊಳ್ಳಲಿದೆ. ಅಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಐದನೇ ಗ್ಯಾರಂಟಿ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ.
ಯುವನಿಧಿ ಯೋಜನೆಯಡಿ ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ಹಾಗೂ ಪದವೀಧರರಿಗೆ 3000 ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ.
ಈ ಯುವನಿಧಿಗೆ ಸುಮಾರು 5 ಲಕ್ಷದ 30 ಸಾವಿರ ಫಲಾನುಭವಿಗಳು ಇರುವುದಾಗಿ ಅಂದಾಜಿಸಲಾಗಿದೆ. ಇವರಲ್ಲಿ 4 ಲಕ್ಷದ 81 ಸಾವಿರ ಪದವೀಧರರು ಹಾಗೂ 48,153 ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಯುವಕರಿದ್ದಾರೆ. ಇವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲು 250 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.
ಪದವಿ ಹಾಗೂ ಡಿಪ್ಲೋಮಾ ಮುಗಿಸಿದ ಆರು ತಿಂಗಳವರೆಗೆ ಯಾವುದೇ ಕೆಲಸ ಸಿಗದವರು ಈ ಯುವನಿಧಿ ಯೋಜನೆಯ ಲಾಭ ಪಡೆಯುವ ಫಲಾನುಭವಿಗಳಾಗಿದ್ದಾರೆ. ಎರಡು ವರ್ಷದೊಳಗೆ ಕೆಲಸ ಸಿಕ್ಕರೆ ಭತ್ಯೆ ಸ್ಥಗಿತಮಾಡಲಾಗುತ್ತದೆ. ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ, 2023ರಲ್ಲಿ ತೇರ್ಗಡೆ ಹೊಂದಿರಬೇಕು. ಕನಿಷ್ಠ 6 ವರ್ಷಗಳ ಕಾಲ ರಾಜ್ಯದಲ್ಲಿ ನೆಲೆಸಿ, ವ್ಯಾಸಂಗ ಮಾಡಿರಬೇಕು ಎಂಬುದು ಷರತ್ತಾಗಿದೆ.