ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 19 ವರ್ಷದ ಯುವಕನೊಬ್ಬನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬ್ರಹ್ಮಾವರದ ಆಕಾಶವಾಣಿ ಸಮೀಪದ ಸ್ವರ್ಣ ರೆಸಿಡೆನ್ಸಿಯಲ್ಲಿ ವಾಸಿಸುತ್ತಿದ್ದ, ಮೂಲತಃ ಶಿರೂರಿನ ಮುಸ್ಲಿಂ ಮೊಹಲ್ಲಾದ ಜೆ.ಎಂ. ಕ್ರಾಸ್ ರೋಡ್ ನಿವಾಸಿ ಸೈಯದ್ ಮೊಹಮ್ಮದ್ ಮೆಹರಾಜ್ (19) ಎಂದು ಗುರುತಿಸಲಾಗಿದೆ.ಉಡುಪಿ ಉಪ ವಿಭಾಗದ ಪೊಲೀಸ್ ಅಧಿಕಾರಿ ಬೆಳ್ಳಿಯಪ್ಪ ಕೆ.ಯು. ಮತ್ತು ಮಲ್ಪೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದ ಪೊಲೀಸ್ ತಂಡವು, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಸಾರ್ವಜನಿಕ ಸ್ಥಳವೊಂದರಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದೆ.ಕಾರ್ಯಾಚರಣೆಯ ವೇಳೆ ಪೊಲೀಸರು 1.03 ಗ್ರಾಂ ಎಂಡಿಎಂಎ, ಮಾದಕ ದ್ರವ್ಯ ಸಾಗಾಟಕ್ಕೆ ಬಳಸುತ್ತಿದ್ದ ಸ್ಕೂಟರ್ ಮತ್ತು ಇತರ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಒಟ್ಟು ಸೊತ್ತಿನ ಮೌಲ್ಯ ಸುಮಾರು 1.52 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.ಆರೋಪಿಯು ಕಾಪು, ಬ್ರಹ್ಮಾವರ, ಉಡುಪಿ ಮತ್ತು ಮಣಿಪಾಲ ಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಈ ಮಾದಕ ವಸ್ತುವನ್ನು ಪೂರೈಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.




