ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ ಗುರುವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 7 ತಿಂಗಳ ಹಸುಗೂಸು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದೆ. ವೇಗದ ಚಾಲನೆ ಮತ್ತು ಚಾಲಕನ ನಿಯಂತ್ರಣ ತಪ್ಪಿದ ಕಾರಣದಿಂದಾಗಿ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ವಾಹನ ಸಂಪೂರ್ಣ ಜಖಂಗೊಂಡಿವೆ.ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ದೊಡ್ಡಮೂಡಹಳ್ಳಿ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಪ್ರಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ಕಾರಿನಲ್ಲಿದ್ದ ಮುಬಾರಕ್ (70) ಹಾಗೂ ಕೇವಲ 7 ತಿಂಗಳ ಹಸುಗೂಸು ಸ್ಥಳದಲ್ಲೇ ಕೊನೆಯುಸಿರೆಳೆದಿವೆ. ಇನ್ನುಳಿದಂತೆ ಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ಐವರಿಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಾಮರಾಜನಗರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಚಾಮರಾಜನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.




