ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಬಾರಿ ಅಧಿಕಾರಕ್ಕೇರಿದ ಬಳಿಕ ಮಂಡಿಸಿದ ಮೊದಲ ರಾಜ್ಯ ಬಜೆಟ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಲವು ಘೋಷಣೆಗಳನ್ನು ಮಾಡಿತ್ತು. ಈ ಘೋಷಣೆಯಲ್ಲಿ ಅರ್ಧದಷ್ಟು ಘೋಷಣೆಗಳು ಜಾರಿಯಾಗಿದ್ದರೆ, ಇನ್ನೂ ಹಲವು ಘೋಷಣೆಗಳು ಜಾರಿಗೆ ಬಾಕಿ ಉಳಿದಿವೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ 7 ಘೋಷಣೆಗಳನ್ನು ಮಾಡಲಾಗಿತ್ತು. ಅವುಗಳಲ್ಲಿ 4 ಘೋಷಣೆಗಳು ಮೀನುಗಾರಿಕೆಗೆ ಸಂಬಂಧಪಟ್ಟವುಗಳಾಗಿವೆ.
ಘೋಷಣೆಗಳ ಸ್ಥಿತಿ ಏನು? :
1. ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿ ರಹಿತವಾಗಿ ನೀಡುವ ಸಾಲದ ಮಿತಿ 50 ಸಾವಿರದಿಂದ 3 ಲಕ್ಷ ರೂ. ವರೆಗೆ ಹೆಚ್ಚಳ – ಈ ಘೋಷಣೆ ಜಾರಿಯಾಗಿದ್ದು, ಪ್ರಸಕ್ತ ಮೀನುಗಾರ ಮಹಿಳೆಯರು ಬ್ಯಾಂಕುಗಳಲ್ಲಿ ಬಡ್ಡಿ ರಹಿತವಾಗಿ 3 ಲಕ್ಷ ರೂ ವರೆಗೆ ಸಾಲ ಪಡೆಯುತ್ತಿದ್ದಾರೆ.
2. ಮೀನುಗಾರ ದೋಣಿಗಳಿಗೆ ರಿಯಾಯಿತಿ ದರದ ಡೀಸೆಲ್ ಅನ್ನು 2 ಲಕ್ಷ ಕಿಲೋಮೀಟರ್ ವರೆಗೆ ಹೆಚ್ಚಿಸಲು 250 ಕೋಟಿ ರೂ. ನೆರವು – ಈ ಘೋಷಣೆ ಜಾರಿಯಾಗಿದ್ದು, ಮೀನುಗಾರರು 2 ಲಕ್ಷ ಕಿಲೋಮೀಟರ್ ವರೆಗೆ ರಿಯಾಯತಿ ದರದಲ್ಲಿ ಡೀಸೆಲ್ ಪಡೆಯುತ್ತಿದ್ದಾರೆ.
3. ಮೀನುಗಾರಿಕಾ ದೋಣಿಗಳ ಸೀಮೆ ಎಣ್ಣೆ ಇಂಜಿನ್ಗಳನ್ನು ಪೆಟ್ರೋಲ್ ಇಂಜಿನ್ಗಳಾಗಿ ಬದಲಾಯಿಸಲು ತಲಾ 50 ಸಾವಿರ ರೂ. ಸಹಾಯಧನ, 5 ಕೋಟಿ ರೂ. ನೆರವು- ಈ ಘೋಷಣೆ ಜಾರಿಯಾಗಿದ್ದು, ಮೀನುಗಾರರು ಸೀಮೆ ಎಣ್ಣೆ ಇಂಜಿನ್ಗಳನ್ನು ಪೆಟ್ರೋಲ್ ಇಂಜಿನ್ಗಳಾಗಿ ಬದಲಾಯಿಸಲು 50 ಸಾವಿರ ಸಹಾಯಧನ ಪಡೆಯುತ್ತಿದ್ದಾರೆ.
4. ಮೀನುಗಾರಿಕಾ ದೋಣಿಗಳು ತಂಗುವ ಜೆಟ್ಟಿಗಳು ಹಾಗೂ ಬಂದರುಗಳಲ್ಲಿ ಹೂಳು ತೆಗೆಯುವುದು – ಈ ಘೋಷಣೆಯಂತೆ ಬಂದರುಗಳಲ್ಲಿ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ.
5. ಧರ್ಮಸ್ಥಳದಲ್ಲಿ airstrip ಅಭಿವೃದ್ದಿಪಡಿಸಲು ಕ್ರಮ – ಈ ಘೋಷಣೆಗೆ ಸಂಬಂಧಿಸಿದಂತೆ ಜಾಗದ ಸರ್ವೇ ಕಾರ್ಯ ಮಾತ್ರ ನಡೆದಿದ್ದು, ಮುಂದಿನ ಪ್ರಕ್ರಿಯೆಗಳು ಆರಂಭವಾಗಿಲ್ಲ.
6. ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆ ರಚನೆ, ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಸಸಿಹಿತ್ಲು ಕಡಲ ತೀರದ ಅಭಿವೃದ್ದಿ- ಈ ಘೋಷಣೆ ಕಾರ್ಯ ಇನ್ನೂ ಆರಂಭವಾಗಿಲ್ಲ.
7. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಕ್ರಮ – ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಎರಡ್ಮೂರು ವರ್ಷಗಳು ಸಂದಿದೆ. ಬಜೆಟ್ನಲ್ಲಿ ಈ ಘೋಷಣೆಯಾದರೂ ಯಾವುದೇ ಕ್ರಮಗಳು ಆಗಿಲ್ಲ.
ಇದೇ ವೇಳೆ, ಬಜೆಟ್ನಲ್ಲಿ ಘೋಷಣೆಯಾದ ಮೀನುಗಾರಿಕಾ ಯೋಜನೆಗಳ ಬಗ್ಗೆ ಮೀನುಗಾರ ಮುಖಂಡ ರಾಜರತ್ನ ಸನಿಲ್ ಮಾತನಾಡಿ, ಕಳೆದ ಬಾರಿ ಬಜೆಟ್ ನಲ್ಲಿ ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದೆವು. ಅದಕ್ಕೆ ಕಳೆದ ಬಜೆಟ್ ನಲ್ಲಿ ಸರಕಾರದ ಹಣ ಇಟ್ಟಿದ್ದಾರೆ. ಎಲ್ಲ ಯೋಜನೆಗಳು ಸರಿಯಾದ ಸಂದರ್ಭದಲ್ಲಿ , ಸರಿಯಾದ ಸಮಯದಲ್ಲಿ ಬಳಕೆಯಾಗಬೇಕು. ಮಂಗಳೂರು ಧಕ್ಕೆ ಬಗ್ಗೆ ಗಮನ ಕಡಿಮೆ ಆಗಿದೆ. ಕಳೆದ ಬಜೆಟ್ನಲ್ಲಿ ಘೋಷಣೆಯಾದ ಯೋಜನೆಗಳಿಗೆ ಹಣ ಬಂದಿದೆ. ಅದು ಜಾರಿಯಾಗಿದೆ ಎಂದು ಹೇಳಿದರು.