ಸುರತ್ಕಲ್; ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿದ ಮಂಗಳೂರು ಪೊಲೀಸರು ಈ ಬಗ್ಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್ ಶಶಿಕುಮಾರ್, ಪ್ರಕರಣಕ್ಕೆ ಸಂಬಂಧಿಸಿ ಆರು ಜನರ ಬಂಧನವಾಗಿದೆ ಎಂದು ಹೇಳಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಶ್ರೀನಿವಾಸ್ ಕಾಟಿಪಳ್ಳ (23), ಅಭಿಷೇಕ್ (23) ದೀಕ್ಷಿತ್ ಕಾಟಿಪಳ್ಳ (21), ಸುಹಾಸ್ ( 29), ಮೋಹನ್ (23) ಮತ್ತು ಗಿರೀಶ್ (27) ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತರೆಲ್ಲರೂ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ತಿಳಿದುಬಂದಿದೆ. ಬಜಪೆಯ ಸುಹಾಸ್ ಶೆಟ್ಟಿ ಎಂಬಾತ ಅಭಿಷೇಕ್ ಮೂಲಕ ಹತ್ಯೆಗೆ ಮೊದಲು ಸ್ಕೆಚ್ ಹಾಕಿದ್ದಾರೆ. ಜುಲೈ 27ರಂದು ಸುರತ್ಕಲ್‌ನ ಒಂದು ಜಾಗದಲ್ಲಿ ಅಭಿಷೇಕ್, ಶ್ರೀನಿವಾಸ ಹಾಗೂ ಉಳಿದವರನ್ನ ಸೇರಿಸಿ ಹತ್ಯೆಗೆ ಸಂಚು ರೂಪಿಸಿದ್ದಾನೆ. ಮೋಹನ್ ಮತ್ತು ಗಿರಿಧರ್ ಮಧ್ಯಾಹ್ನದ ವೇಳೆಗೆ ಅಜಿತ್ ಕ್ರಾಸ್ತಾ ಅವರ ಕಾರನ್ನು 15 ಸಾವಿರ ರೂಪಾಯಿಗೆ ಡೀಲ್ ಮಾಡಿ ತರುತ್ತಾರೆ ಎಂದರು.ಜುಲೈ 27 ರಂದು ಮಧ್ಯಾಹ್ನ ಮೋಹನ್ ಮತ್ತು ಗಿರಿಧರ್ ಕಾರು ತೆಗೊಂಡು ಬಂದಿದ್ದಾರೆ. ಗಿರಿಧರ್ ಇಯಾನ್ ಕಾರನ್ನು ಡ್ರೈವ್ ಮಾಡಿಕೊಂಡು ಬಂದರೆ, ಸುಹಾಸ್, ಮೋಹನ್, ಅಭಿಷೇಕ್ ಟಾರ್ಗೆಟ್ ಪ್ಲಾನ್ ಮಾಡಿದ್ದಾರೆ. ಟಾರ್ಗೆಟ್ ಮಂಗಳೂರಿನ ಕೋರ್ಟ್ ಬಳಿಯೇ ನಡೆಸಿದ್ದಾರೆ. ಯಾಕೆಂದರೆ ಆರೋಪಿಗಳಲ್ಲಿ ಕೆಲವರಿಗೆ ಆ ದಿನ ಕೋರ್ಟ್ ಇತ್ತು. ಅದಕ್ಕೆ ಅಲ್ಲೇ ಸೇರಿ ತಂತ್ರ ಮಾಡಿದ್ದಾರೆ. ಯಾರನ್ನು ಹತ್ಯೆ ಮಾಡಬೇಕು ಎಂದು ತಂತ್ರ ಮಾಡುವಾಗ ಫಾಝಿಲ್ ನ ಹೆಸರು ಬರುತ್ತದೆ. ಬಳಿಕ
ಫಾಜಿಲ್ ಗೆ ಟಾರ್ಗೆಟ್ ಮಾಡಿದ ಆರೋಪಿಗಳು, ಆ ಬಳಿಕ ಮಂಕಿಕ್ಯಾಪ್ ರೆಡಿ ಮಾಡಿ ಸುರತ್ಕಲ್ ಹೊರವಲಯದಲ್ಲಿ ಬಳಿಕ ಊಟ ಮಾಡಿ ಹತ್ಯೆಗೆ ಸಿದ್ದತೆ ನಡೆಸಿದ್ದಾರೆ.
ಫಾಜಿಲ್ ಹತ್ಯೆಗೂ ಮುನ್ನ ಸುರತ್ಕಲ್‌ನಲ್ಲಿ ಹತ್ಯೆಯಾದ ಜಾಗದಲ್ಲಿ ಎಲ್ಲಾ ಆರೋಪಿಗಳು ಮೂರು ಬಾರಿ ಓಡಾಟ ಮಾಡಿದ್ದಾರೆ. ಸಂಜೆ ಆರು ಜನರು ಕಾರಿನಲ್ಲಿ ಬಂದು ಫಾಜಿಲ್ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಸರಿಯಾದ ಸ್ಥಳದಲ್ಲಿ ಫಾಜಿಲ್ ಕಣ್ಣಿಗೆ ಬೀಳುತ್ತಿದ್ದಂತೆ ಶ್ರೀನಿವಾಸ, ಮೋಹನ್ ಮತ್ತು ಸುಹಾಸ್ ಮಾರಕಾಸ್ತ್ರ ಹಿಡಿದು ಫಾಜಿಲ್ ಮೇಲೆ ದಾಳಿ ಮಾಡಿದ್ದಾರೆ.
ಕೃತ್ಯದ ವೇಳೆ ಗಿರಿಧರ್ ಕಾರು ಚಾಲಕನಾಗಿದ್ದನು, ದೀಕ್ಷಿತ್ ಕಾರಿನಲ್ಲೇ ಕುಳಿತಿದ್ದನು, ಅಭಿಷೇಕ್ ಕಾರಿನಿಂದ ಪರಾರಿಯಾಗುವ ಸಂದರ್ಭದಲ್ಲಿ ಯಾರು ಕೂಡ ಅಡ್ಡಿ ಬರಬಾರದೆಂದು ಕಾರಿನ ಬಳಿ ನಿಲ್ಲುತ್ತಾನೆ ಎಂದು ಆಯುಕ್ತರು ವಿವರಿಸಿದರು.
ಕೃತ್ಯ ನಡೆಸಿದ ಬಳಿಕ ಕಾರಿನಲ್ಲೇ ಪರಾರಿಯಾದ ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ, ಸ್ನೇಹಿತನ ಮೂಲಕ ಬೇರೆ ಕಾರೊಂದನ್ನು ತರಿಸಿಕೊಂಡು ಪರಾರಿಯಾಗಿದ್ದಾರೆ. ಉಡುಪಿಯ ಉದ್ಯಾವರ ಬಳಿ ಆರು ಆರೋಪಿಗಳನ್ನ ಬಂಧಿಸಲಾಗಿದೆ. ಸದ್ಯ ಆರೂ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹತ್ಯೆಗೆ ಪ್ರೇಮ ಪ್ರಕರಣ ಮತ್ತು ಫಾಜಿಲ್ ಸಮುದಾಯದವರ ಒಳಗಡೆ ಇರುವ ಪಂಗಡಗಳ ನಡುವೆ ಆದಂತಹ ವ್ಯತ್ಯಾಸಗಳೇ ಕಾರಣ ಎಂಬ ಸುದ್ದಿಗಳು ಹಬ್ಬಿದ್ದವು, ಆದರೆ ಕೃತ್ಯಕ್ಕೆ ಇವ್ಯಾವುದೇ ಕಾರಣಗಳಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಕೆಲವು ರೌಡಿಗಳು ಕೃತ್ಯವನ್ನು ನಾವೇ ಮಾಡಿದ್ದೇವೆ, ನಮ್ಮ ಹುಡುಗರೇ ಮಾಡಿದ್ದಾರೆ ಎಂದು ಹೇಳಿಕೊಂಡು ತಿರುಗಾಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಶಶಿಕುಮಾರ್ ತಿಳಿಸಿದ್ದಾರೆ.