ಉಡುಪಿಯ ಕೆಳಾರ್ಕಳಬೆಟ್ಟು- ಸಂತೆಕಟ್ಟೆ ರಸ್ತೆಯಲ್ಲಿ ನಾಲ್ಕು ದಿನಗಳ ಹಿಂದೆ ಪಾದಚಾರಿ ಮಹಿಳೆಯ ಮೊಬೈಲ್ ಫೋನ್ ಮತ್ತು ಪರ್ಸ್ ಎಗರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಲ್ಪೆಯ ತೊಟ್ಟಂ ನಿವಾಸಿ ದರ್ಶನ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಬಾಗಲ್ಕೋಟೆ ಮೂಲದ ಮಹಿಳೆ ಸರಸ್ವತಿ (21) ಎಂಬವರು ಮಾರ್ಚ್ 21 ರಂದು ಬೆಳಿಗ್ಗೆ 11:45 ಗಂಟೆಗೆ ಸಂತೆಕಟ್ಟೆಯಲ್ಲಿನ ವೈದ್ಯರ ಬಳಿ ಹೋಗಲು ತನ್ನ ಮಗನನ್ನು ಎತ್ತಿಕೊಂಡು ಕೆಳಾರ್ಕಳಬೆಟ್ಟುವಿನ ತನ್ನ ತಾಯಿಯ ಮನೆಯಿಂದ ಹೊರಟು ಕೆಳಾರ್ಕಳಬೆಟ್ಟು- ಸಂತೆಕಟ್ಟೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಸುಲಿಗೆ ನಡೆದಿತ್ತು. ಅಪರಿಚಿತ ಮೋಟಾರ್ ಸೈಕಲ್ ಸವಾರನೊಬ್ಬ ಹಿಂಬದಿಯಿಂದ ಬಂದು ಸರಸ್ವತಿ ಅವರ ಕೈಯಲ್ಲಿದ್ದ ಚೀಲವನ್ನು ಬಲತ್ಕಾರವಾಗಿ ಕಸಿದುಕೊಂಡು ಕೆಮ್ಮಣ್ಣು ಕಡೆಗೆ ಪರಾರಿಯಾಗಿದ್ದನು. ಅಪರಿಚಿತ ವ್ಯಕ್ತಿ ಎಗರಿಸಿದ್ದ ಚೀಲದಲ್ಲಿ ಮೊಬೈಲ್ ಪೋನ್ ಮತ್ತು 2500 ರೂಪಾಯಿ ಹಣವಿದ್ದ ಸಣ್ಣ ಪರ್ಸ್ ಇತ್ತು. ಈ ಬಗ್ಗೆ ಸರಸ್ವತಿ ಅವರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಮಾರ್ಚ್ 24 ರಂದು ಬಂಧಿಸಿ ಆತನಿಂದ 13,000 ರೂಪಾಯಿ ಬೆಲೆಯ ರೆಡ್ಮಿ ಮೊಬೈಲ್ ಫೋನ್ ಮತ್ತು 2,500 ನಗದು ಹಾಗೂ ಲೇಡೀಸ್ ಪರ್ಸನ್ನು ವಶಪಡಿಸಿಕೊಂಡಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರವಿ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.