ರಸ್ತೆ ಬದಿಗಳಲ್ಲಿ ಇರುವ ಚಾಟ್ಸ್ ಅಂಗಡಿಗಳಲ್ಲಿ ನಿಂತು ಕ್ಯಾಬೇಜ್ ಮಂಚೂರಿಯನ್ ಸವಿಯೋ ಮಜಾನೇ ಬೇರೆ. ಆದರೆ ಕರೊನಾದಿಂದಾಗಿ ಮನೆಯಿಂದ ಹೊರಗೆ ಬರೋಕೂ ನೂರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದುಬಿಟ್ಟಿದೆ. ಆದರೆ ಈ ಕ್ಯಾಬೇಜ್ ಮಂಚೂರಿಯನ್ನ್ನ ನೀವು ಮನೆಯಲ್ಲೇ ಬಹಳ ಆರಾಮಾಗಿ ತಯಾರು ಮಾಡಬಹುದು.
ಬೇಕಾಗುವ ಸಾಮಗ್ರಿ: ಕ್ಯಾಬೇಜ್ – 1 (ಮಧ್ಯಮ ಗಾತ್ರದ್ದು), ಮೈದಾ ಹಿಟ್ಟು – 1/2 ಕಪ್, ಜೋಳದ ಹಿಟ್ಟು – 3/4 ಕಪ್, ಈರುಳ್ಳಿ – 1(ದೊಡ್ಡದು).ಹಸಿ ಮೆಣಸು – 2, ಕೊತ್ತಂಬರಿಸೊಪ್ಪು, 1 ಕಪ್ ಅಡುಗೆ ಎಣ್ಣೆ – 1, ಕಾಳು ಮೆಣಸು ಪುಡಿ – 1/2 ಚಮಚ, ಸೋಯಾ ಸಾಸ್ – 1 ಚಮಚ , ವಿನೇಗರ್ – 1 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಚಿಟಿಕೆಯಷ್ಟು ರೆಡ್ ಫುಡ್ ಕಲರ್( ಅಗತ್ಯವಿದ್ದರೆ ಮಾತ್ರ), ರುಚಿಗೆ ತಕ್ಕಷ್ಟು ಉಪ್ಪು, ನೀರು
ಮಾಡುವ ವಿಧಾನ: ಕ್ಯಾಬೇಜ್ನ್ನ ಸಣ್ಣಗೆ ತುರಿದು ಚೆನ್ನಾಗಿ ತೊಳೆದುಕೊಳ್ಳಿ . ಇದಕ್ಕೆ ಮೈದಾ ಹಿಟ್ಟು, ಜೋಳದ ಹಿಟ್ಟು, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸು ಪುಡಿ, ಫುಡ್ ಕಲರ್, ಉಪ್ಪು ಹಾಕಿ ಚೆನ್ನಾಗಿ ಕಲಸಿ. ಕ್ಯಾಬೇಜ್ ನೀರು ಬಿಡೋದ್ರಿಂದ ಹೆಚ್ಚಿಗೆ ನೀರು ಹಾಕೋ ಅವಶ್ಯಕತೆ ಇರೋದಿಲ್ಲ. ಒಂದು ವೇಳೆ ಕ್ಯಾಬೇಜ್ನಲ್ಲಿದ್ದ ನೀರಿನ ಅಂಶ ಸಾಕಾಗಿಲ್ಲ ಅಂದಲ್ಲಿ ಮಾತ್ರ ನೀರನ್ನ ಮಿಶ್ರಣಕ್ಕೆ ಸಿಂಪಡಿಸಿಕೊಂಡು ಕಲಿಸಿಡಿ. ಈ ಮಿಶ್ರಣವನ್ನ ಚಿಕ್ಕ ಬಾಲ್ಗಳ ಸೈಜ್ನಲ್ಲಿ ಉಂಡೆ ಮಾಡಿ ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ.
ಇನ್ನೊಂದು ಪಾತ್ರೆಗೆ ಸ್ವಲ್ಪ ಅಡಿಗೆ ಎಣ್ಣೆ ಹಾಕಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಕತ್ತರಿಸಿದ ಮೆಣಸನ್ನ ಹಾಕಿ ಹುರಿಯಿರಿ. ಇದಕ್ಕೆ 1 ಚಮಚ ಸೋಯಾ ಸಾಸ್ ಹಾಗೂ ವಿನೇಗರ್ ಹಾಕಿ( ಇವೆರೆಡನ್ನ ಮೊದಲೇ ಒಂದು ಕಪ್ನಲ್ಲಿ ಮಿಶ್ರಣ ಮಾಡಿಟ್ಟರೆ ಇನ್ನೂ ಒಳ್ಳೆಯ ಟೇಸ್ಟ್ ಬರಲಿದೆ), 2 ಚಮಚ ಟೊಮ್ಯಾಟೋ ಸಾಸ್, ಉಪ್ಪು, ಹಾಗೂ ಸ್ವಲ್ಪ ನೀರಿಗೆ 1 ಚಮಚ ಜೋಳದ ಹಿಟ್ಟನ್ನ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನೂ ಗ್ರೇವಿಗೆ ಹಾಕಿ ಕಲಿಸಿ. ಇದಾದ ಬಳಿಕ ಗ್ರೇವಿಗೆ ಎಣ್ಣೆಯಲ್ಲಿ ಕರಿದ ಕ್ಯಾಬೇಜ್ ಉಂಡೆಗಳನ್ನ ಹಾಕಿ ಕಲಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನ ಹಾಕಿ ಸರ್ವ್ ಮಾಡಿ.