ಮಂಗಳೂರು: ಮೊಬೈಲ್ ಆನ್‌ಲೈನ್ ಗೇಮ್ ಫ್ರೀ ಫೈರ್‌ನಲ್ಲಿ ಸೋತ ದ್ವೇಷದಿಂದ ಯುವಕನನ್ನು ಚೂರಿಯಿಂದ ಇರಿದು ಕೊಲ್ಲಲು ಯತ್ನಿಸಿದ ಪ್ರಕರಣದ ಅಪರಾಧಿಗೆ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮಂಗಳೂರು ನಗರದ ಜಪ್ಪು ಬಪ್ಪಾಲ್ ನಿವಾಸಿ ಪ್ರತ್ಯುಶ್ ಸಾಲಿಯಾನ್ ಫ್ರೀ ಫೈರ್ ಮೊಬೈಲ್ ಗೇಮ್‌ನಲ್ಲಿ ಸಂಜಯ್ ಪೂಜಾರಿ ಎಂಬವನನ್ನು ಸೋಲಿಸಿದ್ದರು. ಈ ಕಾರಣದಿಂದಾಗಿ ಸಂಜಯ್ ಪೂಜಾರಿಗೆ ಪ್ರತ್ಯುಶ್ ಮೇಲೇ ದ್ವೇಷ ಇತ್ತು. 17-05-2023 ರಂದು ಮಧ್ಯಾಹ್ನ 3.40ರ ಸುಮಾರಿಗೆ, ಪ್ರತ್ಯುಶ್ ಸಾಲಿಯಾನ್ ಮನೆಯಿಂದ ನಡೆದುಕೊಂಡು ನಂದಿಗುಡ್ಡೆ ಕಡೆಗೆ ತೆರಳುತ್ತಿದ್ದ ವೇಳೆ ಸಂಜಯ್ ಪೂಜಾರಿ ಅವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಇರಿದು ಕೊಲೆಯತ್ನ ನಡೆಸಿ ಜೀವ ಬೆದರಿಕೆ ಹಾಕಿದ್ದ ಕುರಿತು ಕೇಸ್ ದಾಖಲಾಗಿತ್ತು.




