ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದ ಕೇರಳ ಲಾಟರಿಯ ನಕಲಿ ಜಾಹೀರಾತನ್ನು ನಂಬಿ ಸಾರ್ವಜನಿಕರೊಬ್ಬರು ಹಂತ-ಹಂತವಾಗಿ ಬರೋಬ್ಬರಿ ₹1,85,636 ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿ ವಂಚನೆಗೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಮೇ 29 ರಂದು ಸಂತ್ರಸ್ತರು ತಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ “₹50 ರ ಟಿಕೆಟ್‌ಗೆ ಸಂಜೆ ಡ್ರಾ” ಎಂಬ ಕೇರಳ ಲಾಟರಿಯ ಜಾಹೀರಾತು ಕಂಡುಬಂದಿತ್ತು. ಅದಲ್ಲಿದ್ದ ಲಿಂಕ್ ಮೂಲಕ ಕರೆ ಮಾಡಿದಾಗ ನವೀನ್ ಎಂಬ ಅಪರಿಚಿತ ವ್ಯಕ್ತಿ ಲಾಟರಿ ನಂಬರ್‌ಗಳನ್ನು ಕಳುಹಿಸಿದ್ದನು. ಅದರಲ್ಲಿ ಎರಡು ನಂಬರ್ ಆಯ್ಕೆ ಮಾಡಿದ್ದ ಸಂತ್ರಸ್ತರು, ಆತ ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನರ್ ಮುಖೇನ ₹100 ಪಾವತಿಸಿದ್ದರು. ಅಂದೇ ಸಂಜೆ 4 ಗಂಟೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, “ನಿಮಗೆ ₹12 ಲಕ್ಷ ರೂಪಾಯಿ ಬಂಪರ್ ಲಾಟರಿ ಬಹುಮಾನ ಬಂದಿದೆ” ಎಂದು ನಂಬಿಸಿದ್ದನು.ಬಹುಮಾನದ ಹಣ ವರ್ಗಾಯಿಸಲು ಸಂತ್ರಸ್ತರ ಬ್ಯಾಂಕ್ ಖಾತೆ, ಐಎಫ್‌ಎಸ್‌ಸಿ ಕೋಡ್ ಹಾಗೂ ಗುರುತಿನ ಚೀಟಿ (UIDAI) ದಾಖಲೆಗಳನ್ನು ಪಡೆದ ವಂಚಕರು, ಬಳಿಕ ಪ್ರೊಸೆಸಿಂಗ್ ಫೀಸ್ ಮತ್ತು ವಿವಿಧ ತೆರಿಗೆಗಳ ಹೆಸರಲ್ಲಿ ಹಣ ಪೀಕಲು ಆರಂಭಿಸಿದರು. ಮೊದಲು 1% ಕಮಿಷನ್ ಎಂದು ದೀಪಕ್ ಎಂಬುವವರ ಗೂಗಲ್ ಪೇ ನಂಬರ್‌ಗೆ (9729838069) ₹12,000 ಪಾವತಿಸಿಕೊಳ್ಳಲಾಯಿತು. ಮೇ 30 ರಂದು ತೆರಿಗೆ ಎಂದು ಅದೇ ನಂಬರ್‌ಗೆ ₹24,981 ಹಾಕಿಸಿಕೊಳ್ಳಲಾಯಿತು. ತದನಂತರ ತೆರಿಗೆ ಬಾಂಡ್ ಹೆಸರಿನಲ್ಲಿ ರಾಜ್ ಕುಮಾರ್ ಎಂಬುವವರ ಗೂಗಲ್ ಪೇ ನಂಬರ್‌ಗೆ (9523765412) ₹58,760 ವರ್ಗಾಯಿಸಿಕೊಳ್ಳಲಾಯಿತು. ಕೊನೆಯದಾಗಿ,ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಖಾತೆಗೆ (272201000005603) ₹89,895 ಹಣವನ್ನು ನೆಫ್ಟ್ (NEFT) ಮಾಡಿಸಿಕೊಳ್ಳಲಾಗಿತ್ತು.ಒಟ್ಟು ₹1,85,636 ಪಾವತಿಸಿದ ಬಳಿಕವೂ ಹಣ ಬಾರದಿದ್ದಾಗ ಸಂತ್ರಸ್ತರಿಗೆ ಅನುಮಾನ ಬಂದು ಕಚೇರಿ ವಿಳಾಸ ಕೇಳಿದ್ದಾರೆ. ವಂಚಕ ಕೇರಳದ ತ್ರಿವೇಂಡ್ರಮ್‌ನ ನಕಲಿ ರೂಟ್ ಮ್ಯಾಪ್ ಕಳುಹಿಸಿದ್ದನು. ಜೂನ್ 1 ರಂದು ಸಂತ್ರಸ್ತರು ತಮ್ಮ ಸ್ನೇಹಿತನೊಂದಿಗೆ ರೈಲಿನಲ್ಲಿ ಹೊರಟು ಜೂನ್ 2 ರಂದು ತ್ರಿವೇಂಡ್ರಮ್ ತಲುಪಿದ್ದಾರೆ. ಅಲ್ಲಿಗೆ ಹೋಗಿ ವಂಚಕನ ಮೊಬೈಲ್ ನಂಬರ್‌ಗೆ (9032823911) ಕರೆ ಮಾಡಿದಾಗ, “ನಾನು ಕಚೇರಿಯಲ್ಲಿ ಇಲ್ಲ, ಸಂಜೆಯಾಗುತ್ತದೆ” ಎಂದು ಉತ್ತರಿಸಿದ್ದಾನೆ. ಆದರೆ ಸಂತ್ರಸ್ತರು ನೇರವಾಗಿ ಅಲ್ಲಿನ ಅಧಿಕೃತ ಲಾಟರಿ ಕಚೇರಿಗೆ ತೆರಳಿ ವಿಚಾರಿಸಿದಾಗ, ಇದೊಂದು ಸಂಪೂರ್ಣ ನಕಲಿ (Fake) ಲಾಟರಿ ಜಾಲ ಎಂಬುದು ತಿಳಿದುಬಂದಿದೆ. ತಮಗೆ ಆನ್‌ಲೈನ್ ಮೂಲಕ ವಂಚಿಸಿದ ಕಿರಾತಕರನ್ನು ಪತ್ತೆಹಚ್ಚುವಂತೆ ಸಂತ್ರಸ್ತರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.




