ಬೆಂಗಳೂರಿನ ಪ್ರತಿಷ್ಠಿತ 5-ಸ್ಟಾರ್ ಮತ್ತು 3-ಸ್ಟಾರ್ ಹೋಟೆಲ್‌ಗಳು ತಮ್ಮ ಗ್ರಾಹಕರಿಗೆ ಅವಧಿ ಮೀರಿದ ಹಾಗೂ ನೈರ್ಮಲ್ಯ ರಹಿತ ಆಹಾರ ಪದಾರ್ಥಗಳನ್ನು ನೀಡುತ್ತಿರುವುದು ಆಹಾರ ಸುರಕ್ಷತಾ ಇಲಾಖೆಯ ದಾಳಿಯಿಂದ ಬಹಿರಂಗವಾಗಿದೆ. ಆಗಸ್ಟ್ 7ರಂದು ರಾಜ್ಯ ಆಹಾರ ಸುರಕ್ಷತಾ ವಿಭಾಗ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಬಿಬಿಎಂಪಿ ವ್ಯಾಪ್ತಿಯ ಜಂಟಿ ಸಹಯೋಗದೊಂದಿಗೆ ನಗರದಾದ್ಯಂತ ಈ ದಿಢೀರ್ ತಪಾಸಣೆ ನಡೆಸಿದೆ.
ಬೆಂಗಳೂರಿನ ಬೇರೆ ಬೇರೆ ಭಾಗಗಳಲ್ಲಿ ಒಟ್ಟು 30 ವಿಶೇಷ ತಂಡಗಳನ್ನು ರಚಿಸಿ ದಾಳಿ ನಡೆಸಲಾಗಿದ್ದು, ನಗರದ ಪ್ರಮುಖ 26 ಸ್ಟಾರ್ ಹೋಟೆಲ್‌ಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ವೇಳೆ ಇಲಾಖೆಯ ಅಧಿಕಾರಿಗಳು ಒಟ್ಟು 35 ವಿಭಿನ್ನ ಆಹಾರ ಮಾದರಿಗಳನ್ನು (Food Samples) ವಶಕ್ಕೆ ಪಡೆದು, ಹೆಚ್ಚಿನ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಕಾನೂನು ಉಲ್ಲಂಘನೆ ಮತ್ತು ಲೋಪಗಳು: ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ಹಾಗೂ 2011ರ ಪರವಾನಗಿ ಮತ್ತು ನೋಂದಣಿ ನಿಯಮಾವಳಿಗಳ ಅಡಿಯಲ್ಲಿ ಈ ಪರಿಶೀಲನೆ ನೆರವೇರಿತು. ಕಾರ್ಯಾಚರಣೆಯ ಸಂದರ್ಭದಲ್ಲಿ ಹೋಟೆಲ್‌ಗಳ ಅಡುಗೆ ಮನೆಗಳ ಅಸ್ವಚ್ಛತೆ, ಕಳಪೆ ನಿರ್ವಹಣೆ ಹಾಗೂ ಆಹಾರ ಸಂಗ್ರಹಣಾ ಕೊಠಡಿಗಳ ದುಸ್ಥಿತಿ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಒಂದೇ ಕಡೆ ಸಂಗ್ರಹಿಸಿಡುವುದು, ಲೇಬಲ್ ಇಲ್ಲದ ಬ್ರಾಂಡ್ ರಹಿತ ಪದಾರ್ಥಗಳ ಬಳಕೆ, ಬೂಜು ಹಿಡಿದ ತರಕಾರಿಗಳು ಹಾಗೂ FSSAI ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಪ್ಯಾಕ್ ಮಾಡಲಾಗಿದ್ದ ಆಹಾರ ಉತ್ಪನ್ನಗಳು ಪತ್ತೆಯಾಗಿವೆ. ಮಾಂಸದ ಪೊಟ್ಟಣಗಳಲ್ಲಿ ಲೇಬಲಿಂಗ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಎದ್ದು ಕಾಣುತ್ತಿತ್ತು.
ವಶಪಡಿಸಿಕೊಂಡ ವಿವಿಧ ಪದಾರ್ಥಗಳು: ಅಧಿಕಾರಿಗಳು ಪರಿಶೀಲನೆ ನಡೆಸಿದ ಮಾದರಿಗಳಲ್ಲಿ ಕೋಳಿಮಾಂಸ, ಕುರಿಮಾಂಸ, ಮೀನು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಬೇಕರಿ ಪದಾರ್ಥಗಳು, ಚಹಾಪುಡಿ, ಅಡುಗೆ ಎಣ್ಣೆ, ಖಾರದಪುಡಿ, ಅರಶಿಣ, ಚೀಸ್, ಸಾಸ್, ವಿನೆಗರ್, ಶುಂಠಿ, ಮೆಣಸಿನಪುಡಿ, ಹಪ್ಪಳ ಮತ್ತು ಗೋಡಂಬಿಯಂತಹ ನಿತ್ಯ ಬಳಕೆಯ ಸಾಮಗ್ರಿಗಳು ಸೇರಿವೆ.




