ಮಂಗಳೂರು : ಉದ್ಯೋಗ ಅರಸಿ ಇಸ್ರೇಲ್ಗೆ ತೆರಳಿದ್ದ ಮಂಗಳೂರಿನ ಶಕ್ತಿನಗರದ ಕಾರ್ಮಿಕ ಕಾಲೋನಿ ನಿವಾಸಿ ಶಡ್ರಕ್ ಇಮ್ಯಾನುವಲ್ (41) ಅಲ್ಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ಮೂಲದವರಾದ ಇವರು ಅಕ್ಟೋಬರ್ 16ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಕಣ್ಮರೆಯಾದ ಮೂರು ದಿನಗಳ ಬಳಿಕ ಅಂದರೆ ಅಕ್ಟೋಬರ್ 19ರಂದೇ ಅವರು ಮೃತಪಟ್ಟಿದ್ದಾರೆ ಎಂದು ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ದಾಖಲೆಗಳು ಸ್ಪಷ್ಟಪಡಿಸಿವೆ.
2025ರ ಮೇ 16ರಂದು ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಉದ್ಯೋಗ ವೀಸಾ ಪಡೆದು ಇಸ್ರೇಲ್ಗೆ ಹೋಗಿದ್ದ ಶಡ್ರಕ್, ನಜರೆತ್ ಹತ್ತಿರದ ನೊಫ್ ಹಗಲಿಲ್ನ ‘ಯುಸಿಟಿ ಲಿಕ್ವಿಡ್/ಫ್ಲೂಯಿಡ್ ಸೊಲ್ಯೂಷನ್ಸ್’ ಸಂಸ್ಥೆಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. 2026ರ ಅಕ್ಟೋಬರ್ 16ರ ರಾತ್ರಿ 8:05ರ ಸುಮಾರಿಗೆ ತಮ್ಮ ಪತ್ನಿ ಹಾಗೂ ಮನೆಯವರೊಂದಿಗೆ 22 ನಿಮಿಷಗಳ ಕಾಲ ವಾಟ್ಸ್ಆ್ಯಪ್ ವಿಡಿಯೋ ಕರೆಯಲ್ಲಿ ಮಾತನಾಡಿದ ಬಳಿಕ ಅವರ ಸಂಪರ್ಕ ಕಡಿತಗೊಂಡಿತ್ತು. ಕೆಲಸಕ್ಕೂ ಹಾಜರಾಗದೆ ನಾಪತ್ತೆಯಾಗಿದ್ದರಿಂದ ಕಂಗಾಲಾಗಿದ್ದ ಪತ್ನಿ ಡೇಸಿ ಇಮ್ಯಾನುವಲ್ ಮತ್ತು ಸಹೋದರಿ ಸವಿತಾ ಅವರು ಮಂಗಳೂರು ಪೊಲೀಸ್ ಆಯುಕ್ತರು, ಜನಪ್ರತಿನಿಧಿಗಳು ಹಾಗೂ ಭಾರತೀಯ ರಾಯಭಾರ ಕಚೇರಿಗೆ ದೂರು ಸಲ್ಲಿಸಿ ಹುಡುಕಾಟಕ್ಕೆ ನೆರವು ಕೋರಿದ್ದರು. ಆದರೆ, ಸಂಪರ್ಕ ತಪ್ಪಿದ ಮೂರೇ ದಿನಗಳಲ್ಲಿ ಅವರು ಇಹಲೋಕ ತ್ಯಜಿಸಿರುವ ವಿಚಾರ ತಿಳಿದು ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.
ನವೆಂಬರ್ 9, 2026ರಂದು ಟೆಲ್ ಅವೀವ್ನ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ ವಿಭಾಗವು ಮೃತದೇಹವನ್ನು ಭಾರತಕ್ಕೆ ರವಾನಿಸಲು ನಿರಾಕ್ಷೇಪಣಾ ಪತ್ರ (NOC) ನೀಡಿತ್ತು. ಪತ್ನಿ ಡೇಸಿ ಅವರ ಕೋರಿಕೆಯಂತೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲು ಸಹೋದರಿ ಸವಿತಾ ಕೆ.ಎಸ್. ಮತ್ತು ಚಂದ್ರಮೋಹನ ಚಂದ್ರನ್ ಅವರಿಗೆ ರಾಯಭಾರ ಕಚೇರಿ ಅನುಮತಿ ನೀಡಿತ್ತು. ಅದರಂತೆ 37 ದಿನಗಳ ಬಳಿಕ ಶರೀರವನ್ನು ಮಂಗಳೂರಿಗೆ ತರಲಾಗಿದೆ.
ಇಂದು (ಬುಧವಾರ, ನವೆಂಬರ್ 25) ಮಧ್ಯಾಹ್ನ 3:00 ಗಂಟೆಗೆ ಶಕ್ತಿನಗರದ ಕಾರ್ಮಿಕ ಕಾಲೋನಿ 1ನೇ ಕ್ರಾಸ್ನಲ್ಲಿರುವ ‘ಅಮೇಜಿಂಗ್ ಗ್ರೇಸ್’ ಮನೆಗೆ ಮೃತದೇಹವನ್ನು ತರಲಾಗುತ್ತದೆ. ನಂತರ ಸಂಜೆ 4:00 ಗಂಟೆಗೆ ಅಂತಿಮ ಯಾತ್ರೆ ನಡೆಸಿ, ಮಂಗಳೂರಿನ ಗೋರಿಗುಡ್ಡೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.




