ಮಂಗಳೂರು: ಭಾರತೀಯ ತಟರಕ್ಷಣ ಪಡೆಗೆ ಸೇರ್ಪಡೆಗೊಳ್ಳಲಿರುವ ಬೆಂಗಳೂರಿನ ಎಚ್‌ಎಎಲ್ ನಿರ್ಮಿತ “ಅತ್ಯಾಧುನಿಕ ಹಗುರ ಹೆಲಿಕಾಪ್ಟರ್(ಎಎಲ್‌ಎಚ್) ಸಿಜಿ 870′ ಸ್ವೀಕಾರ ಸಮಾರಂಭ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಮಂಗಳವಾರ ಜರಗಿತು.
ಈ ಹೆಲಿಕಾಪ್ಟರ್ ಚೆನ್ನೈಯಲ್ಲಿ ಸೇವೆಗೆ ಸೇರ್ಪಡೆಗೊಳ್ಳಲಿದೆ. ಇದರೊಂದಿಗೆ ಎಚ್‌ಎಎಲ್‌ನೊಂದಿಗೆ ತಟರಕ್ಷಣ ಪಡೆ 2017ರ ಮಾ. 29ರಲ್ಲಿ ನಡೆಸಿದ ಒಪ್ಪಂದ ಮುಕ್ತಾಯಗೊಳ್ಳಲಿದ್ದು ಮುಂದೆ 9 ಸುಸಜ್ಜಿತ ಎಎಲ್‌ಎಚ್ ಎಂಕೆ-3 ಹೆಲಿಕಾಪ್ಟರ್‌ಗಳ ಉತ್ಪಾದನೆಗೆ ಎಚ್‌ಎಎಲ್‌ನೊಂದಿಗೆ ಒಡಂಬಡಿಕೆ ನಡೆಸಲು ಮುಂದಾಗಿದೆ.
ಸಮಾರಂಭದಲ್ಲಿ ಭಾರತೀಯ ತಟರಕ್ಷಣ ಪಡೆ (ಪೂರ್ವ ವಿಭಾಗ) ಯ ಮಹಾನಿರ್ದೇಶಕ ವಿ.ಎಸ್. ಪಠಾನಿಯಾ ಮಾತನಾಡಿ, ಕಳೆದೆರಡು ದಶಕಗಳಲ್ಲಿ ಭಾರತೀಯ ಸಮುದ್ರ ತಟರಕ್ಷಣೆಯಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ. ಕಣ್ಗಾವಲು, ಗುಪ್ತಚರ ಮಾಹಿತಿ ಸಂಗ್ರ ಮತ್ತು ಸಂಬಂಧಿಸಿದ ಭದ್ರತಾ ಸಂಸ್ಥೆಗಳೊಂದಿಗೆ ಮಾಹಿತಿ ವಿನಿಮಯ, ತುರ್ತು ಸಂದರ್ಭದಲ್ಲಿ ಪರಿಣಾಮಕಾರಿ ಸ್ಪಂದನೆ ಮಾಡಲಾಗುತ್ತಿದೆ. ತಟರಕ್ಷಣ ಪಡೆಯ ಜವಾಬ್ದಾರಿಗಳು ಹೆಚ್ಚಿರುವುದರಿಂದ ನಾಲ್ಕು ಎಎಲ್‌ಎಚ್ ಎಂಕೆ -3 ಹೆಲಿಕಾಪ್ಟರ್‌ಗಳ ಸೇರ್ಪಡೆ ಮಿಷನ್ ಆರಂಭಿಸಲಾಗಿದ್ದು ಇದು “ಎಎಲ್‌ಎಚ್ ಸಿಜಿ 870′ ಸೇರ್ಪಡೆಯೊಂದಿಗೆ ಪೂರ್ಣಗೊಳ್ಳುತ್ತಿದೆ’ ಎಂದರು.
ತಟರಕ್ಷಣ ಪಡೆಯ ಹೆಚ್ಚುವರಿ ಮಹಾ ನಿರ್ದೇಶಕ ಕೆ.ಆರ್. ಸುರೇಶ್ ಉಪಸ್ಥಿತರಿದ್ದರು.
ಭಾರತೀಯ ತಟರಕ್ಷಣಾ ಪಡೆ ದಿನದ 24 ಗಂಟೆಗಳ ಕಾಲ ಸಮುದ್ರ ತಟದಲ್ಲಿ ನಿಗಾ ವಹಿಸುತ್ತಿದೆ. ಭದ್ರತೆಯ ಜತೆಗೆ ತೈಲ, ಮೀನು, ಖನಿಜ ಸೇರಿದಂತೆ ಆಸ್ತಿಗಳ ಸಂರಕ್ಷಣೆ, ಜನರ ಪ್ರಾಣರಕ್ಷಣೆ ಮೊದಲಾದ ಕೆಲಸಗಳನ್ನು ಮಾಡುತ್ತಿದೆ.