ವಿಟ್ಲ: ಕಳೆದ ಎರಡು ವರ್ಷಗಳಿಂದ ವೀರಕಂಬ ಗ್ರಾಮ ಪಂ.ವ್ಯಾಪ್ತಿಯ ಬೆತ್ತಸರವು ರಸ್ತೆ ಬದಿಯ ಮರವೊಂದರಲ್ಲಿ ಪಂಚಾಯತ್ ಕುಡಿಯುವ ನೀರಿನ ಕೊಳವೆ ಬಾವಿಯ ಸಂಪರ್ಕದ ತ್ರಿ ಫೇಸ್ ವಿದ್ಯುತ್ ಬೋರ್ಡ್ ನೇತಾಡುತ್ತಿದೆ.
ಈ ಬಗ್ಗೆ ಪಿಡಿಒ ಗೆ ಮಾಹಿತಿ ನೀಡಿದರೂ ಇದರ ಬಗ್ಗೆ ಗಮನ ಹರಿಸದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ನೂರಾರು ಜನ ಓಡಾಡುತ್ತಿರುವ ರಸ್ತೆ ಬದಿಯ ಮರದಲ್ಲಿ ತ್ರಿ ಫೇಸ್ ವಿದ್ಯುತ್ ಬೋರ್ಡ್ ನೇತುಹಾಕಿದ ಸ್ಥಿತಿಯ ಬಗ್ಗೆ ಪಿಡಿಓಗೆ ಮಾಹಿತಿ ನೀಡಿ ಹದಿನೈದು ದಿನ ಕಳೆದಿದೆ.
ಮಳೆಗಾಲದಲ್ಲಿ ಇದರಿಂದ ಪ್ರಾಣಾಪಾಯ ಆಗುವ ಸಂಭವವೂ ಹೆಚ್ಚಿದೆ. ಮಾಹಿತಿ ತಿಳಿದೂ ಇನ್ನೂ ತೆರವುಗೊಳಿಸದೇ ಬೇಜವಾಬ್ದಾರಿ ಮೆರೆದಿರುವುದು ಕಾರಣವಾಗಿದೆ.
ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳು, ಹಿರಿಯರು, ಮಹಿಳೆಯರು ಅರಿವಿಲ್ಲದೆ ಈ ಜಾಗದಲ್ಲಿ ಓಡಾಟ ನಡೆಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಇನ್ನು ಯಾವುದಾದರೂ ದೂರು ನೀಡಲು ಪಿಡಿಓಗೆ ಕರೆ ಮಾಡುವಾಗ ಕರೆ ಎತ್ತದೆ ಸತಾಯಿಸುತ್ತಿರುವುದು ಕೂಡ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯ ಅಧಿಕಾರ ಈ ರೀತಿಯಾಗಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದು ಕೂಡಾ ಆಕ್ರೋಶಕ್ಕೆ ಪ್ರಮುಖ ಕಾರಣ.
ಇನ್ನು ಬೇಸಿಗೆ ಕಾಲದಲ್ಲಿ ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರು ಸರಬರಾಜು ಕೂಡ ಸರಿಯಾಗಿ ಮಾಡಿರಲಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಇಷ್ಟು ಮಾತ್ರವಲ್ಲದೆ ಈ ಹಿಂದೆ ಹಲವಾರು ಅಧಿಕ ಪ್ರಸಂಗ ಕೆಲಸ ಮಾಡಿ ಗ್ರಾಮಸ್ಥರಿಂದ ಉಗಿಸಿಕೊಂಡ ಘಟನೆಗಳೂ ನಡೆದಿದೆ.
ಇದರಿಂದ ಬೇಸತ್ತ ಗ್ರಾಮಸ್ಥರು ಪಿಡಿಓ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ಮುಂದಾಗಿದ್ದಾರೆ.