ಮಂಗಳೂರು: ಲೋನ್ ಆ್ಯಪ್ ದಂಧೆಕೋರರು ಸಾಲ ಪಡೆದವರ ಜೀವ ಹಿಂಡುತ್ತಿರುವುದು ಸುದ್ದಿಯಾಗುತ್ತಲೇ ಇದೆ. ಇದೀಗ ಲೋನ್ ಪಡೆದ ವ್ಯಕ್ತಿಯ ಭಾವಚಿತ್ರವನ್ನು ಲೋನ್ ಆ್ಯಪ್ ನವರು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರು ಲೋನ್ ಆ್ಯಪ್ ನಲ್ಲಿ 3500 ರೂ. ಸಾಲಕ್ಕೆ ಅರ್ಜಿ ಹಾಕಿದ್ದರು. ಲೋನ್ ಮಂಜೂರು ಆಗಿ ಬ್ಯಾಂಕ್ ಖಾತೆಗೆ 2800 ರೂ. ಸಾಲ ಜಮಾ ಆಗಿದೆ. ಈ ಸಾಲವನ್ನು ಜು.26ಕ್ಕೆ ಮುಂಚಿತವಾಗಿ ಮರುಪಾವತಿ ಮಾಡಬೇಕಿತ್ತು. ಆದ್ದರಿಂದ ಜು.19ರಂದು 1400 ರೂ. ಬ್ಯಾಂಕ್ ಖಾತೆಯಿಂದ ಪಾವತಿ ಮಾಡಿದ್ದಾರೆ. ಉಳಿದ ಹಣವನ್ನು ಜು.26ರಂದು ಲೋನ್ ಕಳುಹಿಸಿಕೊಟ್ಟ ವ್ಯಕ್ತಿಗೆ ಹಂತಹಂತವಾಗಿ 4,200 ರೂ. ಪಾವತಿ ಮಾಡಿರುತ್ತಾರೆ. ಆದರೂ ಲೋನ್ ನೋಡಿರುವ ಅಪರಿಚಿತ ದೂರುದಾರರ ಮೊಬೈಲ್ ಕಾಂಟಾಕ್ಟ್ ಲೀಸ್ಟ್‌ನಲ್ಲಿರುವ ಅವರ ತಂದೆಯ, ಸಂಬಂಧಿಕರ ಕಾಲೇಜು ಅಧ್ಯಾಪಕರ ಹಾಗೂ ಸಂಪರ್ಕದಲ್ಲಿರುವ ಇತರರ ವಾಟ್ಸ್ಆ್ಯಪ್ ಗೆ ಎಡಿಟ್ ಮಾಡಿದ ಅಶ್ಲೀಲ ಭಾವಚಿತ್ರವನ್ನು ರವಾನಿಸಿದ್ದಾರೆ. ಅಲ್ಲದೆ ದೂರುದಾರ ಲೋನ್ ಪಾವತಿ ಮಾಡಿರುವುದಿಲ್ಲವೆಂದು ಅಶ್ಲೀಲ ಸಂದೇಶ ರವಾನೆ ಮಾಡಿರುತ್ತಾರೆ. ದೂರುದಾರರು ಲೋನ್ ಪಡೆಯುವ ವೇಳೆ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡುವ ಸಂದರ್ಭ ಅಪರಿಚಿತ ವ್ಯಕ್ತಿ ಅವರ ಮೊಬೈಲ್‌ನಲ್ಲಿ ಶೇಖರಣೆಗೊಂಡಿದ್ದ ಮೊಬೈಲ್ ನಂಬರ್ ಗಳನ್ನು ಅವರ ಅರಿವಿಗೆ ಬಾರದಂತೆ ಶೇಖರಿಸಿಕೊಂಡಿದ್ದಾನೆ. ಬಳಿಕ ತೊಂದರೆ ನೀಡುವ ಉದ್ದೇಶದಿಂದಲೇ ಭಾವಚಿತ್ರವನ್ನು ಹಾಗೂ ಸಂಪರ್ಕದಲ್ಲಿರುವ ಇತರರ ಭಾವಚಿತ್ರಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ವಾಟ್ಸ್ಆ್ಯಪ್ ಮೂಲಕ ವೈರಲ್ ಮಾಡಿದ್ದಾರೆ. ಈ ಬಗ್ಗೆ ದೂರುದಾರರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.