ಮಂಗಳೂರು : ಪೊಕ್ಸೊ , ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನ ಮೇಲೆ ನೀಡಿರುವ ಸುಳ್ಳು ಕೇಸ್‌ಗೆ ಸಂಬಂಧಿಸಿದಂತೆ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ನೀಡಿರುವ 2.50ಲಕ್ಷ ಪರಿಹಾರದ ಹಣವನ್ನು ವಾಪಸ್ ಪಡೆದುಕೊಳ್ಳುವಂತೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ ಪೊಕ್ಸೊ ವಿಶೇಷ ನ್ಯಾಯಾಲಯ ದ.ಕ.ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದೆ.
ಬಂಟ್ವಾಳ ತಾಲೂಕಿನ ಕಾವಳಪಡವಲೂರು ನಿವಾಸಿ ತೇಜಸ್ ಎಂಬ ಯುವಕ 2024 ಮಾರ್ಚ್ 21ರಂದು ಸಂಜೆ 6.45ಕ್ಕೆ ಸಂತ್ರಸ್ತೆಯ ಮನೆಗೆ ಬಂದು ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಈ ವೇಳೆ ಆಕೆ ತನ್ನ ಮಾವನನನ್ನು ಕರೆದಿದ್ದಾಳೆ. ಅಲ್ಲಿಗೆ ಬಂದ ಮಾವನಿಗೂ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದನು. ಈ ವೇಳೆ ಅಲ್ಲಿಗೆ ಬಂದ ಸಂತ್ರಸ್ತೆಯ ಅಜ್ಜಿಗೂ ಜಾತಿನಿಂದನೆ ಮಾಡಿದ್ದಲ್ಲದೆ ತಳ್ಳಿ ಕೊಲೆಬೆದರಿಕೆಯೊಡ್ಡಿದ್ದ ಎಂದು ದೂರು ದಾಖಲಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿನಯ್ ದೇವರಾಜ್ ಸಮಗ್ರ ವಿಚಾರಣೆ ನಡೆಸಿ ಸಂತ್ರಸ್ತ ಯುವತಿ, ಆಕೆಯ ಮಾವ, ಮನೆಯವರು, ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ವೇಳೆ ಸಂತ್ರಸ್ತೆಯ ಮನೆವರು ಸುಳ್ಳು ಕೇಸ್ ದಾಖಲಿಸಿದ್ದು ತಿಳಿದು ಬಂದಿದೆ. ಸಂತ್ರಸ್ತೆಯ ತಾಯಿ ಯುವಕನಿಂದ ಕೈಸಾಲ ಹಾಗೂ ಚಿನ್ನಾಭರಣ ಸೇರಿದಂತೆ 5.50ಲಕ್ಷ ಸಾಲ ಪಡೆದಿದ್ದರು.
ಇದನ್ನು ಯುವಕ ಮರಳಿ ಕೇಳುತ್ತಿದ್ದ. ಇದೇ ವಿಚಾರದಲ್ಲಿ ಯುವಕ ಹಾಗೂ ಸಂತ್ರಸ್ತೆಯ ಮನೆಯವರಲ್ಲಿ ವಾಗ್ವಾದ ನಡೆದಿತ್ತು. ಆದ್ದರಿಂದ ಯುವಕನ ಮೇಲೆ ಪೊಕ್ಸೊ ಹಾಗೂ ಜಾತಿನಿಂದನೆ ಕೇಸ್ ದಾಖಲಿಸಿದ್ದಾರೆ. ಕೇಸು ದಾಖಲಾದ ಬಳಿಕ ಸಂತ್ರಸ್ತೆ ಹಾಗೂ ಆಕೆಯ ಮನೆಯವರಿಗೆ 2.50ಲಕ್ಷ ಪರಿಹಾರ ರೂಪವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಹಣ ದೊರಕಿತ್ತು. ಬಳಿಕ ಮನೆಯವರು ಬಾಲಕಿಯ ತಾಯಿ ಯುವಕನಿಂದ ಹಣ, ಚಿನ್ನಾಭರಣಸಾಲ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ನ್ಯಾಯಾಲಯ ಮತ್ತಷ್ಟು ವಿಚಾರಣೆ ನಡೆಸಿದಾಗ ಯುವಕನ ಮೇಲೆ ಸುಳ್ಳು ಕೇಸ್ ದಾಖಲಿಸಿದ ಬಗ್ಗೆ ತಿಳಿದು ಬಂದಿದೆ.