ಮಂಗಳೂರು: ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜಿನ ಆವರಣದಿಂದಲೇ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಇದೇ ಕಾರಣಕ್ಕೆ ಆಕೆಯನ್ನು ಕುಟುಂಬಸ್ಥರೇ ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಪ್ರಕರಣದ ಕುರಿತು ಕಾಲೇಜಿನ ಡೀನ್ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಪ್ರಥಮ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚಿನ ದಿನಗಳಲ್ಲಿ ಆಕೆ ಹಾಸ್ಟೆಲ್‌ನಿಂದ ಹೊರಗೆ ಹೋಗಿ, ಕಾಲೇಜಿಗೂ ಹಾಜರಾಗದೆ ತರಗತಿಗಳನ್ನು ತಪ್ಪಿಸುತ್ತಿದ್ದಳು. ಈ ವಿಚಾರ ಹೆತ್ತವರಿಗೆ ತಿಳಿದು ಕುಟುಂಬದಲ್ಲಿ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ತನ್ನ ಹೆತ್ತವರ ವಿರುದ್ಧವೇ ದೂರು ದಾಖಲಿಸಿದ್ದಳು ಎಂದು ಡೀನ್ ಡಾ. ಶಹನವಾಝ್ ಮಾಣಿಪ್ಪಾಡಿ ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ವಿದ್ಯಾರ್ಥಿನಿ ಎರಡು ದಿನಗಳಿಂದ ಹಾಸ್ಟೆಲ್‌ಗೆ ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಬಳಿಕ ಪೊಲೀಸರು ವಿದ್ಯಾರ್ಥಿನಿಯನ್ನು ಕಾಲೇಜಿಗೆ ಕರೆತಂದಿದ್ದರು. ಗುರುವಾರ ಮನೆಗೆ ಬರುವಂತೆ ಹೆತ್ತವರು ಕರೆದಾಗ ಆಕೆ ಹೋಗಲು ಒಪ್ಪಿರಲಿಲ್ಲ. ಆದರೂ ಆಕೆಯನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.
ಹೆತ್ತವರು ಮತ್ತು ವಿದ್ಯಾರ್ಥಿನಿಯ ನಡುವೆ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮನಸ್ತಾಪವಿತ್ತು. ಕುಟುಂಬಸ್ಥರೇ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ ಕಾರಣ ಕಾಲೇಜಿನ ಸಿಬ್ಬಂದಿ ಮಧ್ಯಪ್ರವೇಶಿಸಿರಲಿಲ್ಲ ಎಂದು ಡೀನ್ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.
ಇನ್ನು, ವಿದ್ಯಾರ್ಥಿನಿ ವಯಸ್ಕಳಾಗಿದ್ದು, ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಕರೆದೊಯ್ಯುವುದು ಕಾನೂನುಬಾಹಿರ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಯುವತಿಯನ್ನು ಆಕೆಯ ಕುಟುಂಬಸ್ಥರೇ ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಯಸ್ಕಳಾದ ಯುವತಿಗೆ ತಾನು ಎಲ್ಲಿ ವಾಸಿಸಬೇಕು ಎಂಬುದನ್ನು ನಿರ್ಧರಿಸುವ ಸಂಪೂರ್ಣ ಹಕ್ಕಿದೆ. ಘಟನೆ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರೆ ವಾಹನವನ್ನು ದೂರ ಹೋಗುವ ಮೊದಲೇ ತಡೆದು ನಿಲ್ಲಿಸಲು ಸಾಧ್ಯವಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.




